ಕರ್ನಾಟಕದಲ್ಲೂ ಅಪ್ಪ ಮಕ್ಕಳಿಗೆ ಟಿಕೆಟ್ ಬೇಡ: ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್

ಬಸವನಗೌಡ ಯತ್ನಾಳ್
ಅಥಣಿ, ಆ.31: ಇತರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಅಪ್ಪ ಮಕ್ಕಳಿಗೆ ಟಿಕೆಟ್ ನೀಡಬಾರದೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಹೇಳಿದ್ದಾರೆ.
ಬುಧವಾರ ಅಥಣಿ ತಾಲೂಕಿನ ರೆಡ್ಡೇರಹಟ್ಟಿ ಗ್ರಾಮದಲ್ಲಿ ಪ್ರಭು ಮಾಧವಾನಂದ ಅಧ್ಯಾತ್ಮಿಕ ಕೇಂದ್ರದಲ್ಲಿ ಶ್ರಾವಣ ಮಾಸ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿಜೆಪಿಯಲ್ಲಿ ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ನಿಯಮ ಜಾರಿಯಾಗಿದೆ. ಈ ಕುರಿತು ನಾನು ಕೂಡ ಕರ್ನಾಟಕದಲ್ಲಿ ತ್ವರಿತವಾಗಿ ಈ ನಿಯಮ ಜಾರಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಅಪ್ಪ ಮಕ್ಕಳಿಗೆ ಹಾಗೂ ಕುಟುಂಬ ರಾಜಕೀಯಕ್ಕೆ ಬಿಜೆಪಿಯಲ್ಲಿ ಟಿಕೆಟ್ ಇಲ್ಲ ಎಂದು ಹೇಳಿದರು.
ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ತೆಗೆದುಕೊಳ್ಳಬೇಕೆಂದು ಸರ್ಕಾರ ನಿಯಮಗಳನ್ನು ಜಾರಿ ಮಾಡಿದೆ. ಇದು ಹಿಂದೂಸ್ತಾನ ಪಾಕಿಸ್ತಾನವಲ್ಲ. ನಾವು ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತೇವೆ, ಡಿಜೆ ಬಳಕೆ ಮಾಡುತ್ತೇವೆ. ವಿದ್ಯುತ್ ಶುಲ್ಕ ಪಾವತಿ ಮಾಡಲ್ಲ ನೀವು ಏನು ಮಾಡುತ್ತೀರಿ ಮಾಡಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.





