ರವಿ ಕಟಪಾಡಿ, ಫ್ರೆಂಡ್ಸ್ ತಂಡ ವೇಷಧಾರಿಯಾಗಿ ಸಂಗ್ರಹಿಸಿದ 14 ಲಕ್ಷ ರೂ. ಅನಾರೋಗ್ಯ ಪೀಡಿತ ಮಕ್ಕಳ ನೆರವಿಗೆ ಹಸ್ತಾಂತರ

ಕಾಪು : ಹೃದಯ ಶ್ರೀಮಂತಿಕೆಯುಳ್ಳ ರವಿ ಕಟಪಾಡಿಯು ಬಡ ಅಶಕ್ತ ಮಕ್ಕಳ ವೈದ್ಯಕೀಯ ನೆರವಿಗೆ ವೇಷಧಾರಿಯಾಗಿ ಹಣ ಸಂಗ್ರಹಿಸಿ ನೀಡುತ್ತಿರುವ ನೆರವು ನೈಜ ಸೇವೆಯಾಗಿದೆ. ಬಡ ಮಕ್ಕಳ ಪಾಲಿಗೆ ಆಶಾ ಕಿರಣವಾಗುವ ರವಿ ಕಟಪಾಡಿ ಅವರು ಬಡವರ, ದೀನ ದಲಿತರ ಸೇವೆಯ ಮೂಲಕ ಭಗವಂತನನ್ನು ಕಾಣುವ ದೃಷ್ಟಿಕೋನವು ಸಮಾಜಕ್ಕೆ ಮಾದರಿಯಾಗಿದೆ ಎಂದು ಕೇಮಾರು ಶ್ರೀ ಸಾಂದೀಪನಿ ಆಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಸಂಜೆ ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ರವಿ ಕಟಪಾಡಿ ಮತ್ತು ಫ್ರೆಂಡ್ಸ್ ತಂಡವು 8ನೇ ಬಾರಿಗೆ ಅಷ್ಟಮಿ ವೇಷಧಾರಿಯಾಗಿ ಸಂಗ್ರಹಿಸಿದ 14 ಲಕ್ಷ 36 ಸಾವಿರ 385 ರೂ.ವನ್ನು 11 ಅನಾರೋಗ್ಯ ಪೀಡಿತ ಅಶಕ್ತ ಬಡ ಮಕ್ಕಳ ವೈದ್ಯಕೀಯ ನೆರವು ಹಸ್ತಾಂತರಿಸುವ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಮಾತನಾಡಿ, ಅಷ್ಟಮಿ ವೇಷದಿಂದ ರೂಪಾಯಿ 1 ಕೋಟಿ ಬಡ ಅಶಕ್ತ ಮಕ್ಕಳಿಗೆ ವೈದ್ಯಕೀಯ ನೆರವು ಅದು ಅಸಾಧಾರಣ ವ್ಯಕ್ತಿತ್ವದಿಂದ ಮಾತ್ರ ಸಾಧ್ಯ. ತನ್ನ ಪ್ರಾಣ, ಆರೋಗ್ಯವನ್ನೂ ಲೆಕ್ಕಿಸದೆ ಮುಗ್ಧ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಂತಹ ಕಲ್ಪನೆಗೆ ಅದು ಊಹೆಗೂ ನಿಲುಕದ್ದು. ಆತನ ಧ್ಯೇಯ, ಪ್ರಿನ್ಸಿಪಲ್ಸ್ ನಿಜಕ್ಕೂ ಮಾದರಿಯಾಗಿದ್ದು, ಉಡುಪಿ ಜಿಲ್ಲೆಗೆ ಹೆಮ್ಮೆ ತರುವಂತಹ ವಿಷಯವಾಗಿದೆ. ಜಿಲ್ಲಾಡಳಿತವು ಸಹಕಾರವನ್ನು ನೀಡಲು ಪ್ರಯತ್ನಿಸುತ್ತದೆ ಎಂದು ಶ್ಲಾಘಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೇಂದ್ರ ಮಾತನಾಡಿ, ಜಗತ್ತಿನಲ್ಲಿ ಇಂತಹ ವ್ಯಕ್ತಿತ್ವ ಸಿಗದು. ತನ್ನ ಶರೀರ ಮತ್ತು ಪ್ರತಿಭೆಯನ್ನು ಬಳಸಿ ಸಣ್ಣ ಮಕ್ಕಳ ಬದುಕು ಕಟ್ಟಿಕೊಡುವ ಕನಸು ಕಂಡಂತಹ ರವಿ ಕಟಪಾಡಿ ಅವರ ಇಂತಹ ಸೇವೆಯು ನೈಜ ಸಮಾಜ ಸೇವೆಯಾಗಿದ್ದು, ನಿಜಕ್ಕೂ ಬಡ ಅಶಕ್ತ ಮಕ್ಕಳ ಪಾಲಿಗೆ ಜೀವದಾತ. ಇಂತಹ ಸೇವೆಗಳಿಂದಲೇ ಭಾರತವು ಸರ್ವ ಶ್ರೇಷ್ಠವಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮಾತನಾಡಿ, ಮಾತೃಹೃದಯಕ್ಕೆ ಸಹಕಾರದ ಮೇರು ವ್ಯಕ್ತಿತ್ವದ ಹೃದಯ ಶ್ರೀಮಂತಿಕೆ ರವಿ ಕಟಪಾಡಿಯದ್ದು. ತಪಸ್ವಿಯಾಗಿ ತಮ್ಮ ತಪೋಫಲವನ್ನು ಸಮಾಜಕ್ಕೆ ನೀಡುವ ದಾನಶೀಲ ಗುಣದ ತುಳುನಾಡಿನ ಕರ್ಣ ರವಿ ಕಟಪಾಡಿ. ಸಮಾಜದ ಬವಣೆ ನೀಗಿಸಲು ಇಷ್ಟು ಶಕ್ತಿಯೊಂದಿಗೆ ಸಾಟಿ ಇಲ್ಲದ ಕಾಯಕದ ಮೂಲಕ ಈತನ ಸಮಾಜ ಸೇವೆಯು ಅಕ್ಷಯವಾಗಲಿ ಎಂದರು.
ಈ ಸಮಾರಂಭದಲ್ಲಿ ರವಿ ಕಟಪಾಡಿ ಮತ್ತು ತಾಯಿ ದೇಯಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಇದುವರೆಗೆ ೮ ಬಾರಿ ಅಷ್ಟಮಿ ವೇಷಧಾರಿಯಾಗಿ ಒಟ್ಟು ರೂಪಾಯಿ 1 ಕೋಟಿ 4 ಲಕ್ಷದ 30 ಸಾವಿರದ 685 ಮೊತ್ತದ ಹಣವನ್ನು ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ರವಿ ಕಟಪಾಡಿ ನೀಡಿರುತ್ತಾರೆ.
ಈ ಸಂದರ್ಭ ಬರ್ಕೆ ಫ್ರೆಂಡ್ಸ್ ಸಂಸ್ಥಾಪಕ ಯಜ್ನೇಶ್ ಬರ್ಕೆ, ಉದ್ಯಾವರ ಜಯಲಕ್ಷ್ಮಿ ಸಿಲ್ಕ್‌ನ ರವೀಂದ್ರ ಹೆಗ್ಡೆ, ಬರ್ಕೆ ಫ್ರೆಂಡ್ಸ್ ಅಧ್ಯಕ್ಷ ಕಿಶನ್ ಕುಮಾರ್, ಸುಚೀಂದ್ರ, ಕಟಪಾಡಿ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದ ಗುರಿಕಾರ ಹರಿಶ್ಚಂದ್ರ ಪಿಲಾರು, ರವಿ ಫ್ರೆಂಡ್ಸ್ ಕಟಪಾಡಿ ಸದಸ್ಯರು ವೇದಿಕೆಯಲ್ಲಿದ್ದರು.
ರವಿ ಫ್ರೆಂಡ್ಸ್ ಕಟಪಾಡಿಯ ಮಾರ್ಗದರ್ಶಕ ಮಹೇಶ್ ಶೆಣೈ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿ, ವಂದಿಸಿದರು ಸಹಕರಿಸಿದರು.







