ಮಂಗಳೂರು: ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು, ಆ.31: ಜಮೀಯ್ಯತುಲ್ ಫಲಾಹ್ ಮಂಗಳೂರು ತಾಲೂಕು ಸಮಿತಿಯ ವತಿಯಿಂದ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಬುಧವಾರ ಫಲಾಹ್ ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಜಮೀಯ್ಯತುಲ್ ಫಲಾಹ್ ಸಂಸ್ಥೆಯು ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಆದರ್ಶ ಸಂಸ್ಥೆಯಾಗಿದೆ. ಶೈಕ್ಷಣಿಕವಾಗಿ ತೀರಾ ಹಿಂದುಳಿದ ಪ್ರದೇಶದಲ್ಲಿ ಸರಕಾರದ ಯಾವುದೇ ಅನುದಾನವಿಲ್ಲದೆ ಶಾಲೆಗಳನ್ನೂ ಪ್ರಾರಂಭಿಸಿದ ಕೀರ್ತಿ ಜಮೀಯ್ಯತುಲ್ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರು.
ಯಾರೇ ಆಗಲಿ ಬಡತನದಲ್ಲಿ ಹುಟ್ಟಿದರೆ ಬಡತನದಲ್ಲೇ ಮರಣಿಸಬೇಕೆಂದಿಲ್ಲ. ಬಡತನದ ಮಧ್ಯೆಯೇ ಉನ್ನತ ಶಿಕ್ಷಣ ಪಡೆದು ಸಮುದಾಯದ ಕೀರ್ತಿ ಪತಾಕೆ ಹಾರಿಸಬಹುದು. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬಹುದು. ಆದರೆ ಅದಕ್ಕಾಗಿ ಅವಿರತವಾಗಿ ಶ್ರಮಿಸಬೇಕಾಗಿದೆ. ಶಿಕ್ಷಣವು ಯಾರದೋ ಒಬ್ಬರ ಸೊತ್ತಲ್ಲ. ಅದು ಸಾರ್ವತ್ರಿಕವಾಗಿದೆ ಎಂದರು. ಜಮೀಯ್ಯತುಲ್ ಫಲಾಹ್ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷ ಎಂ.ಹೆಚ್. ಮಲಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಮೀಯ್ಯತುಲ್ ಫಲಾಹ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಝಲ್ ರಹೀಂ ಕೆ, ಕೋಶಾಧಿಕಾರಿ ಎಫ್.ಎಂ. ಬಶೀರ್ ಭಾಗವಹಿಸಿದ್ದರು. ಮಂಗಳೂರು ತಾಲೂಕು ಸಮಿತಿಯ ಕೋಶಾಧಿಕಾರಿ ಇಬ್ರಾಹಿಂ ಕೋಡಿಜಾಲ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಬಶೀರ್ ಅಹ್ಮದ್ ಕಿರಾಅತ್ ಪಠಿಸಿದರು. ಕಾರ್ಯದರ್ಶಿ ಅಹ್ಮದ್ ಕುಂಞಿ ಮಾಸ್ಟರ್ ಸ್ವಾಗತಿಸಿದರು. ಉಪಾಧ್ಯಕ್ಷ ಕೆ.ಎಸ್. ಉಸ್ಮಾನ್ ವಂದಿಸಿದರು. ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.






.jpeg)
.jpeg)



.jpeg)

.jpeg)


