ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಆಡಳಿತ ಯಂತ್ರದ ದುರ್ಬಳಕೆ : ಡಿವೈಎಫ್ಐ ಆರೋಪ

ಪ್ರಧಾನಿ ನರೇಂದ್ರ ಮೋದಿ
ಮಂಗಳೂರು, ಆ.31: ನಗರದ ಬಂಗ್ರ ಕೂಳೂರಿನಲ್ಲಿ ಸೆ.2 ರಂದು ಆಯೋಜಿಸಲಾಗಿರುವ ಪ್ರಧಾನಿ ನರೇಂದ್ರ ಮೋದಿಯ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಸೇರಿಸಲು ದ.ಕ. ಮತ್ತು ಉಡುಪಿ ಜಿಲ್ಲೆಗಳ ಆಡಳಿತ ಯಂತ್ರವನ್ನೇ ಬಳಸಿಕೊಳ್ಳಲಾಗುತ್ತಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ನರೇಂದ್ರ ಮೋದಿಯ ಕಾರ್ಯಕ್ರಮಗಳು ನೇರವಾಗಿ ಜನಸಾಮಾನ್ಯರಿಗೆ ಸಂಬಂಧ ಪಟ್ಟದ್ದಲ್ಲ. ಬಂದರು ಹಾಗೂ ಎಂಆರ್ಪಿಎಲ್ನ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸರಕಾರಿ ಯೋಜನೆಗಳ ಫಲಾನುಭವಿಗಳನ್ನು ಜೋಡಿಸಿ ಪರೋಕ್ಷವಾಗಿ ಬಿಜೆಪಿಯ ಸಾರ್ವಜನಿಕ ಸಭೆಯನ್ನು ನಡೆಸಲಾಗುತ್ತಿದೆ. ಜಿಲ್ಲಾಡಳಿತವೇ ಮುಂದೆ ನಿಂತು ಜನರನ್ನು ಪ್ರಧಾನಿ ಸಭೆಗೆ ಬರುವಂತೆ ಬಲಪ್ರಯೋಗ ಮಾಡುತ್ತಿದೆ. ಗೋಲ್ಡ್ ಫಿಂಚ್ ಮೈದಾನ ದುರಸ್ತಿಗೊಳಿಸಲು, ಪೆಂಡಾಲ್, ವೇದಿಕೆ ನಿರ್ಮಾಣ ಸಹಿತ ಕಾರ್ಯಕ್ರಮದ ಸಿದ್ದತೆಗೆ ಜನರ ತರಿಗೆಯ ಹಣದಿಂದ ಹತ್ತಾರು ಕೋ.ರೂ.ಗಳನ್ನು ಎಗ್ಗಿಲ್ಲದೆ ಬಳಸಲಾಗುತ್ತಿದೆ. ಬಿಜೆಪಿ ಸರಕಾರದ ವಿರುದ್ಧದ ಅಲೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಲವಾಗಿ ಬೀಸುತ್ತಿರುವುದರಿಂದ ಜನ ಸೇರದಿರುವ ಸಾಧ್ಯತೆಗಳನ್ನು ಮನಗಂಡು ಎರಡೂ ಜಿಲ್ಲೆಗಳ ಆಡಳಿತ ಯಂತ್ರವನ್ನು ಪ್ರಧಾನಿಗಳ ಸಭೆಗೆ ಜನ ಸೇರಿಸಲು ನಿರ್ಲಜ್ಜವಾಗಿ ಬೀದಿಗಿಳಿಸಲಾಗಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರಕಾರದ ಎಲ್ಲಾ ಇಲಾಖೆಗಳಲ್ಲಿ ದುಡಿಯುತ್ತಿರುವವರು, ಬ್ಯಾಂಕ್ ನೌಕರರಿಗೂ ಜನ ಸೇರಿಸುವುದು ಮತ್ತು ಸ್ವತಃ ಹಾಜರಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಸ್ವಸಹಾಯ ಗುಂಪುಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಖುದ್ದು ಹಾಜರಿರುವಂತೆ ಸೂಚನೆ ಹೊರಡಿಸಲಾಗಿದೆ. ವೃದ್ದರು, ಅನಾರೋಗ್ಯ ಪೀಡಿತರು, ಅಂಗವಿಕಲರು ಎಂದು ಪರಿಗಣಿಸದೆ ಸರಕಾರಿ ಯೋಜನೆಗಳ ಫಲಾನುಭವಿಗಳನ್ನು ಗ್ರಾಪಂ ಮಟ್ಟದಿಂದಲೆ ಕಡ್ಡಾಯ ಹಾಜರಿರುವಂತೆ ನೋಡಿಕೊಳ್ಳಲು ಸುತ್ತೋಲೆಗಳನ್ನು ಹೊರಡಿಸಿರುವುದು, ಫಲಾನುಭವಿಗಳ ಜೊತೆಗೆ ಸಾರ್ವಜನಿಕರನ್ನೂ ಕರೆ ತರಲು ಗ್ರಾಪಂ ಸಿಬ್ಬಂದಿ ವರ್ಗಕ್ಕೆ ಟಾರ್ಗೆಟ್ ನೀಡಿರುವುದು, ವಾಹನಗಳನ್ನು ಒದಗಿಸಿರುವುದು ಎಂದೂ ಕಂಡು ಕೇಳರಿಯದ ವಿದ್ಯಮಾನವಾಗಿದೆ. ಒಟ್ಟಾರೆ ಎಲ್ಲಾ ವಿಭಾಗಗಳನ್ನು ಬೆದರಿಸಿ ಕಾರ್ಯಕ್ರಮಕ್ಕೆ ಬರುವಂತೆ ಮಾಡುತ್ತಿರುವುದು ಕಣ್ಣಿಗೆ ಕಾಣುವಂತೆ ನಡೆಯುತ್ತಿದೆ. ಸ್ವತಃ ದ.ಕ. ಜಿಲ್ಲಾಧಿಕಾರಿಗಳೇ ಸುದ್ದಿಗೋಷ್ಟಿ ನಡೆಸಿ ಒಂದೂವರೆ ಲಕ್ಷ ಜನ ಸೇರುತ್ತಾರೆ ಎಂದು ಘೋಷಿಸಿರುವುದು ಆಡಳಿತ ಯಂತ್ರದ ದುರುಪಯೋಗ ನಡೆಯುತ್ತಿರುವುದಕ್ಕೆ ಪ್ರಬಲ ಸಾಕ್ಷಿ ಎಂದಿದ್ದಾರೆ.
ಫಲಾನುಭವಿಗಳ ಯಾವುದೆ ಹೊಸ ಯೋಜನೆಗಳು ಇಲ್ಲದ, ಖಾಸಗಿ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಹೊಂದಿರುವ ಬಂದರಿನ ಸಾಮಾನ್ಯ ಬರ್ತ್ ಉದ್ಘಾಟನೆಯ ಕಾರ್ಯಕ್ರಮಕ್ಕೆ ಸರಕಾರದ ಯೋಜನೆಗಳ ಹಳೆಯ ಫಲಾನುಭವಿಗಳ ಸಹಿತ ಎಲ್ಲಾ ವಿಭಾಗದ ಜನರನ್ನು ಬಲ ಪ್ರಯೋಗಿಸಿ ಮೈದಾನಕ್ಕೆ ಕರೆತರುವ ಅಗತ್ಯ ಏನಿದೆ? ಮಳೆ ಸಂತ್ರಸ್ತರಿಗೆ ಪರಿಹಾರಗಳು ಸರಿಯಾಗಿ ವಿತರಣೆ ಆಗದೆ ಜನ ಸಂಕಷ್ಟದಲ್ಲಿರುವಾಗ ಅವರನ್ನು ಅಣಕಿಸುವಂತೆ ಹತ್ತಾರು ಕೋ.ರೂ ಸುರಿದು ಪ್ರಧಾನಿಯ ಕಾರ್ಯಕ್ರಮ ನಡೆಸುವ ಔಚಿತ್ಯ ಏನು? ಪ್ರಧಾನಿ ತುಳುನಾಡಿನ ಜನರ ಯಾವ ಪ್ರಧಾನ ಬೇಡಿಕೆಗಳನ್ನು ಈಡೇರಿಸುವ ಘೋಷಣೆ ಮಾಡಲಿದ್ದಾರೆ? ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿ ಯಾವುದಾದರು ಯೋಜನೆಗಳು ಘೋಷಣೆ ಆಗಲಿದೆಯೆ? ಎಮ್ಆರ್ ಪಿಎಲ್ ಸಹಿತ ಅವಿಭಜಿತ ಜಿಲ್ಲೆಯ ಉದ್ಯಮಗಳಲ್ಲಿ ಸ್ಥಳೀಯರ ಉದ್ಯೋಗಾವಕಾಶಗಳ ಕುರಿತು, ರಾಷ್ಟ್ರೀಯ ಹೆದ್ದಾರಿ, ಟೋಲ್ ಗೇಟ್ ಸಮಸ್ಯೆಗಳ ಕುರಿತು ಪ್ರಧಾನಿ ಪರಿಹಾರ ಒದಗಿಸುವ ಮಾತುಗಳನ್ನು ಆಡುತ್ತಾರಾ? ಪ್ರಧಾನಿಗಳು ಲೋಕಾರ್ಪಣೆ ಮಾಡಲಿರುವ ಬಂದರಿನ ಬರ್ತ್, ಎಮ್ಅರ್ ಪಿಎಲ್ ನ 655 ಕೋ.ರೂ.ವೆಚ್ಚದ ನೀರು ಶುದ್ದೀಕರಣ ಘಟಕಗಳಾದರು ಸೃಷ್ಟಿ ಮಾಡಿರುವ ಉದ್ಯೋಗಗಳು ಎಷ್ಟು? ಅದರಲ್ಲಿ ಸ್ಥಳೀಯರಿಗೆ ಎಷ್ಟು ಉದ್ಯೋಗಗಳು ಲಭ್ಯ ಆಗಲಿವೆ ಎಂಬುದನ್ನಾದರು ಪ್ರಾಧಾನಿ ಭಾಷಣದಲ್ಲಿ ಹೇಳಿಸಲು ಸಾಧ್ಯವೆ ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
ಕಳೆದು ಹೋಗಿರುವ ವರ್ಚಸ್ಸನ್ನು ಸರಿಪಡಿಸಲು ಬಿಜೆಪಿಯು ಈಗ ಪ್ರಧಾನಿ ನರೇಂದ್ರ ಮೋದಿಯ ಸಭೆ ಯಶಸ್ಸುಗೊಳಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದೆ. ಅದಕ್ಕಾಗಿ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಜಿಲ್ಲಾಡಳಿತಗಳನ್ನು ಬಳಸಿಕೊಳ್ಳುತ್ತಿದೆ. ಜನರನ್ನು ಬಲವಂತದಿಂದ ಸಭೆಯಲ್ಲಿ ಕೂಡಿಹಾಕಲು ಯತ್ನಿಸುತ್ತಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಪಾದಿಸಿದ್ದಾರೆ.