ಮುರುಘಾ ಶ್ರೀ ವಿರುದ್ಧ ಪೊಕ್ಸೊ ಪ್ರಕರಣ: ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಚಿತ್ರದುರ್ಗ ಎಸ್ಪಿಗೆ ನೋಟಿಸ್
ಇಂದು ಸ್ವಾಮೀಜಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

ಚಿತ್ರದುರ್ಗ, ಸೆ.1: ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪೊಕ್ಸೊ (POCSO) ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ (NCPCR)ವು ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ (Superintendent of Police) ಪರಶುರಾಮ್ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವಿಜಯಪುರ | ಭೀಕರ ರಸ್ತೆ ಅಪಘಾತ: ಮಗು, ಬಾಣಂತಿ ಸಹಿತ ಒಂದೇ ಕುಟುಂಬದ ಮೂವರು ಮೃತ್ಯು
ಈ ಪ್ರಕರಣದ ತನಿಖೆ ಸೂಕ್ತವಾದ ರೀತಿಯಲ್ಲಿ ಆಗುತ್ತಿಲ್ಲ ಎಂಬ ಸಾರ್ವಜನಿಕ ಆರೋಪಗಳ ಹಿನ್ನೆಲೆಯಲ್ಲಿ ಎನ್ ಸಿಪಿಸಿಆರ್ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣದ ತನಿಖೆಯ ಕುರಿತಂತೆ ಹಲವು ಪ್ರಶ್ನೆಗಳನ್ನು ನೋಟಿಸ್ ನಲ್ಲಿ ಎತ್ತಿರುವ ಆಯೋಗವು 7 ದಿನಗಳಲ್ಲಿ ಉತ್ತರಿಸುವಂತೆ ಪರಶುರಾಮ್ ಅವರಿಗೆ ಸೂಚಿಸಿದೆ.
ಇಂದು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ
ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಂದು(ಸೆ.1) ನಡೆಸಲಿದೆ.
ಜಾಮೀನು ಕೋರಿ ಮುರುಘಾ ಶರಣು ಆ.29ರಂದು ಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಲ್ಕಣಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದರು. ತಕರಾರು ಸಲ್ಲಿಕೆಗೆ ಅವಕಾಶ ಕಲ್ಪಿಸಿ ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಲಾಗಿತ್ತು.
ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆನ್ನಲಾದ ಬಾಲಕಿಯರ ಪರ ಕಾನೂನು ಹೋರಾಟಕ್ಕೆ 'ಒಡನಾಡಿ' ಸಂಸ್ಥೆ ನಿರ್ಧರಿಸಿದೆ.







