ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಮೂರು ಸಾವಿರ ಮಂದಿಯ ಭದ್ರತಾ ವ್ಯವಸ್ಥೆ: ಗೃಹಸಚಿವ ಆರಗ ಜ್ಞಾನೇಂದ್ರ

ಮಂಗಳೂರು, ಸೆ.1: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಗರದ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸೆ.2ರಂದು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಪೊಲೀಸರು, ಕೆಎಸ್‌ಆರ್‌ಪಿ, ಎಎನ್‌ಎಫ್, ಸಿಎಆರ್, ಗಡಿಭದ್ರತಾ ಪಡೆ, ಡಿಎಆರ್, ಆರ್‌ಎಎಫ್, ಐಎಸ್‌ಜಿ, ಗರುಡ ಪಡೆ ಸೇರಿದಂತೆ 3000 ಮಂದಿಯಿಂದ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಗೋಲ್ಡ್ ಫಿಂಚ್ ಮೈದಾನದ ಸಿದ್ಧತೆಗಳನ್ನು ಗುರುವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿ 12:30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ಅವರು ವಾಪಸ್ ಹೋಗುವವರೆಗಿನ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಪೊಲೀಸರು ಮಾಡಿದ್ದಾರೆ. ವಿಶೇಷವಾಗಿ ಡಿಜಿಪಿಯವರು ಬರಲಿದ್ದಾರೆ. ಎಡಿಜಿಪಿ ಈಗಾಗಲೇ ಆಗಮಿಸಿದ್ದಾರೆ. 100 ಮಂದಿ ಅಧಿಕಾರಿಗಳು ಇಲ್ಲಿರಲಿದ್ದಾರೆ. 2000 ಮಂದಿ ಸಿವಿಲ್ ಪೊಲೀಸರು, ಕೆಎಸ್‌ಆರ್‌ಪಿ, ಎಎನ್‌ಎಫ್, ಸಿಎಆರ್, ಗಡಿಭದ್ರತಾ ಪಡೆ, ಡಿಎಆರ್, ಆರ್‌ಎಎಫ್, ಐಎಸ್‌ಜಿ, ಗರುಡ ಪಡೆ ಸೇರಿದಂತೆ ಒಟ್ಟು 3000 ಮಂದಿಯ ಭದ್ರತಾ ವ್ಯವಸ್ಥೆಯನ್ನು ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ: ಪೊಕ್ಸೊ ಪ್ರಕರಣ: ಮುರುಘಾ ಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಭದ್ರತಾ ಲೋಪ ಆಗದಂತೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲುರವರು ವಿಶೇಷ ಆದ್ಯತೆಯೊಂದಿಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಮಾತನಾಡಿ, ನಾಳೆ ಮಂಗಳೂರಿನಲ್ಲಿ 3,700 ಕೋಟಿ ರೂ.ಗಳ ಅಭಿವೃದ್ದಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನ ಮಂತ್ರಿ ಮಾತನಾಡಲಿದ್ದಾರೆ ಎಂದರು.
ಎರಡೂ ಜಿಲ್ಲೆಗಳ ಕೇಂದ್ರ ಮತ್ತು ರಾಜ್ಯ ಸರಕಾರದ ಫಲಾನುಭವಿಗಳನ್ನು ಸೇರಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆ ಮಾಡಲಾಗಿದೆ. ನಿರೀಕ್ಷೆಗೆ ಮೀರಿ ಜನ ಸೇರುವ ನಿರೀಕ್ಷೆ ಇದೆ. 2,000ಕ್ಕೂ ಅಧಿಕ ಬಸ್‌ಗಳ ವ್ಯವಸ್ಥೆ, ವಿವಿಧ ಯೋಜನೆಗಳ ಫಲಾನುಭವಿಗಳನ್ನು ಗ್ರಾಮ ಮಟ್ಟದಲ್ಲೇ ಸಂಪರ್ಕಿಸುವ ಕಾರ್ಯ ಒಂದು ವಾರದಿಂದ ನಡೆದಿದೆ. ಭದ್ರತಾ ದೃಷ್ಟಿಯಿಂದ ಪೂರ್ವಾಹ್ನ 11:30ರಿಂದ 12 ಗಂಟೆಯೊಳಗೆ ಗೋಲ್ಡ್ ಫಿಂಚ್ ಮೈದಾನದಲ್ಲಿ ಸಾರ್ವಜನಿಕರು ಸೇರಬೇಕು. 1:30ಕ್ಕೆ ಸರಿಯಾಗಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ಈ ಸಮಾವೇಶದ ಮೂಲಕ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಮೈಲಿಗಲ್ಲು ಸೃಷ್ಟಿಯಾಗಲಿದೆ. ರಾಜಕಾರಣದ ದೃಷ್ಟಿಯಿಂದಲೂ ಪ್ರಧಾನಿ ಮೋದಿ ಆಗಮನ ಹೊಸ ಉತ್ಸಾಹ ಮೂಡಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅಭಿಪ್ರಾಯಿಸಿದ್ದಾರೆ.
