ಅವಿಶ್ವಾಸ ಗೊತ್ತುವಳಿ: ಮಾಳ ಗ್ರಾಪಂ ಅಧ್ಯಕ್ಷ ಸ್ಥಾನ ಕಳೆದುಕೊಂಡ ಮಲ್ಲಿಕಾ ಶೆಟ್ಟಿ

ಮಲ್ಲಿಕಾ ಶೆಟ್ಟಿ
ಕಾರ್ಕಳ, ಸೆ.1: ಮಾಳ ಗ್ರಾಪಂ ಅಧ್ಯಕ್ಷೆ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಮಂಡಿಸಿದ್ದು, 3ನೇ 2 ಮತಗಳಿಂದ ಮಲ್ಲಿಕಾ ಶೆಟ್ಟಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.
ಮಾಳ ಗ್ರಾಪಂ 15 ಮಂದಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಹೊಂದಿದೆ. ಇಲ್ಲಿ ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಮೀಸಲಾತಿ ಪ್ರಕಟವಾಗಿತ್ತು. 2ನೇ ಬಾರಿ ಸದಸ್ಯೆಯಾಗಿರುವ ಮಲ್ಲಿಕಾ ಶೆಟ್ಟಿ 2021ರ ಫೆಬ್ರವರಿಯಲ್ಲಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.
ಗ್ರಾಪಂಗೆ ಸಂಬಂಧಿಸಿದಂತೆ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಮಲ್ಲಿಕಾ ಶೆಟ್ಟಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಆರೋಪ ಕಳೆದೊಂದು ವರ್ಷದಿಂದ ಕೇಳಬಂದಿತ್ತು. ಸಮಸ್ಯೆ ಬಗೆಹರಿಸುವಲ್ಲಿ ಬಿಜೆಪಿ ಮುಖಂಡರು ಸಾಕಷ್ಟು ಪ್ರಯತ್ನಪಟ್ಟಿದ್ದರೂ ಸಾಧ್ಯವಾಗಿಲ್ಲ. ಅಧ್ಯಕ್ಷ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸುವುದಕ್ಕಾಗಿ ಮಲ್ಲಿಕಾ ಶೆಟ್ಟಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಉಪಾಧ್ಯಕ್ಷ ಅಶೋಕ್ ಬರ್ವೆ ಸೇರಿದಂತೆ 10 ಸದಸ್ಯರು ಅರ್ಜಿ ಸಲ್ಲಿಸಿದ್ದರು. ಅದರಂತೆ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದು, ಮಲ್ಲಿಕಾ ಶೆಟ್ಟಿ ಪರ 4, ವಿರುದ್ಧ 10 ಮಂದಿ ಮತ ಚಲಾಯಿಸಿದ್ದಾರೆ. ಸದಸ್ಯೆ ಅನಾರೋಗ್ಯ ಕಾರಣ ಗೈರು ಹಾಜರಾಗಿದ್ದರು ಆ ಮೂಲಕ ಮಲ್ಲಿಕಾ ಶೆಟ್ಟಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.
ಮಲ್ಲಿಕಾ ಶೆಟ್ಟಿ ಪರ ಸಂಜೀವ ಪರ, ಶಾಂತಿ ಶೆಟ್ಟಿ, ಸುಂದರಿ ಗೌಡ, ಮಲ್ಲಿಕಾ ಶೆಟ್ಟಿ ಮತ ಚಲಾಯಿಸಿದರೆ, ಅವರ ವಿರುದ್ಧ ಪಂಚಾಯತ್ ಉಪಾಧ್ಯಕ್ಷ ಅಶೋಕ್ ಬರ್ವೆ, ಉಮೇಶ್ ಪೂಜಾರಿ, ಸುಧೀರ್ ಶೆಟ್ಟಿ, ನಿತೀಶ್ ತೆಂಡುಲ್ಕರ್, ಅಶೋಕ್ಶೆ ಟ್ಟಿ, ಶಶಿಕಲಾ ಪೂಜಾರಿ, ನೀಲು ಮೇರ್ತಿ, ಯೋಗೀಶ್ ಪೂಜಾರಿ, ವಿಮಲಾ, ರಕ್ಷಿತ ಮತ ಚಲಾಯಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಮದ ಪ್ರಕಾರ ಮಾಳ ಗ್ರಾಪಂ ಉಪಾಧ್ಯಕ್ಷ ಅಶೋಕ್ ಬರ್ವೆ ಸೇರಿದಂತೆ 10 ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅರ್ಜಿ ನೀಡಿದ್ದು, ಅದರಂತೆ 3ನೇ 2 ಸದಸ್ಯರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದ್ದರಿಂದ ಸಹಜವಾಗಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಅಧ್ಯಕ್ಷಗಿರಿ ಕಳೆದುಕೊಂಡಿದ್ದಾರೆ. ಯಾವುದೇ ಸಮಸ್ಯೆಗಳಿದ್ದರೂ ಅವರ ಆಂತರಿಕ ಮತ್ತು ಪಂಚಾಯತ್ ಸಮಸ್ಯೆಗಳಾಗಿದ್ದು, ನಮಗೆ ದೂರು ಬಂದ ಕಾರಣ ಈ ಬಗ್ಗೆ ಕ್ರಮ ಕೈಗೊಂಡಿದ್ದೇವೆ.
-ಕೆ.ರಾಜು, ಸಹಾಯಕ ಆಯುಕ್ತ, ಕುಂದಾಪುರ
ಕಳೆದ 18 ತಿಂಗಳಿನಿಂದ ಯಾವುದೇ ಅವ್ಯವಹಾರ, ದುರ್ನಡತೆ ಇಲ್ಲದೆ ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ. ಯಾವ ಕಾರಣಕ್ಕಾಗಿ ನನ್ನ ಮೇಲೆ ಅವಿಶ್ವಾಸ ಗೊತ್ತುವಳಿ ತಂದಿದ್ದಾರೋ ಎಂಬುದು ನನಗೆ ಹೇಳಿಲ್ಲ. ನಾನು ನನ್ನ ವಿರುದ್ಧ ಮಸಲತ್ತು ನಡೆಸುತ್ತಿರುವವರ ಅವ್ಯವಹಾರವನ್ನು ಬಯಲಿಗೆಳೆದು ಅವರ ಅವ್ಯವಹಾರಕ್ಕೆ ಸಾಥ್ನೀ ಡದಿರುವುದೇ ಇದಕ್ಕೆ ಮುಖ್ಯ ಕಾರಣ. ಕ್ರಮಬದ್ಧವಾಗಿ ಮಾಸಿಕ ಸಭೆಗಳು, ಗ್ರಾಮಸಭೆಗಳನ್ನು ನಡೆಸಿದ್ದೇನೆ. ನನ್ನ ಹೆಸರಿನಲ್ಲಿ ಪೋರ್ಜರಿ ಸಹಿ ಮಾಡಿ ತಾತ್ಕಾಲಿಕ ಸಿಬ್ಬಂದಿಯೋರ್ವರು ಬೇರೆ ಇಲಾಖೆಗೆ ಪತ್ರಗಳನ್ನು ಕಳುಹಿಸಿದಾಗಲೂ ಸೌಹಾರ್ದಯುತವಾಗಿ ಎಲ್ಲ ಸದಸ್ಯರ ಅಪೇಕ್ಷೆ ಮೇರೆಗೆ ಮಹಿಳೆ ಎಂಬ ನೆಲೆಯಲ್ಲಿ ಆಕೆಯನ್ನು ಕೆಲಸದಲ್ಲಿ ಮುಂದುವರೆಸಿಕೊಂಡು ಹೋಗಿರುತ್ತೇನೆ. ನನ್ನ ಬಗ್ಗೆ ಇಷ್ಟೆಲ್ಲಾ ಪಿತೂರಿ ನಡೆಸಿದರೂ ತಾನು ಯಾರಿಗೂ ತೊಂದರೆ ಮಾಡಿರುವುದಿಲ್ಲ. ಇಂದಿನ ಈ ಅವಿಶ್ವಾಸ ಗೊತ್ತುವಳಿ ವಿರುದ್ಧ ಹೈಕೋರ್ಟ್ ನಲ್ಲಿ ದಾವೆ ಸಲ್ಲಿಸಲಿದ್ದೇನೆ.
-ಮಲ್ಲಿಕಾ ಶೆಟ್ಟಿ, ಅಧ್ಯಕ್ಷರು.
- ಪಂಚಾಯತ್ನ ತಾತ್ಕಾಲಿಕ ಉದ್ಯೋ ಗಿಯು ಸಹಿ ಪೋರ್ಜರಿ ಮಾಡಿದ್ದು ನಿಜ. ಈ ಬಗ್ಗೆ ಅವರು ಸಭೆಯಲ್ಲಿ ಎಲ್ಲರ ಮುಂದೆ ಒಪ್ಪಿಕೊಂಡಿದ್ದು, ಪಂಚಾಯತ್ಗೆ ತಪ್ಪೊಪ್ಪಿಗೆ ಪತ್ರವನ್ನು ಬರೆದು ನೀಡಿದ ನಂತರ ಸಭೆಯಲ್ಲಿ ಎಲ್ಲಾ ಸದಸ್ಯರು ಒಪ್ಪಿಕೊಂಡು ಅವರನ್ನು ಕೆಲಸದಲ್ಲಿ ಮುಂದುವರೆಸಿದ್ದಾರೆ. ಅವಿಶ್ವಾಸ ಗೊತ್ತುವಳಿ ವಿಚಾರ ಪಂಚಾಯತ್ ಸದಸ್ಯರ ಆಂತರಿಕ ವಿಷಯವಾಗಿದೆ.
-ರಘುನಾಥ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಾಳ ಗ್ರಾಪಂ







