ಪ್ರಧಾನಿ ಮೋದಿ ಮಂಗಳೂರು ಭೇಟಿ ಹಿನ್ನೆಲೆ ಬಿಗಿ ಬಂದೋಬಸ್ತ್
ಕಾರ್ಯಕ್ರಮಕ್ಕೆ ಬರುವವರು ಲೈಟರ್, ಕಪ್ಪು ಬಟ್ಟೆ, ಕರಪತ್ರಗಳನ್ನು ತರುವಂತಿಲ್ಲ: ಎಡಿಜಿಪಿ ಅಲೋಕ್ ಕುಮಾರ್

ಮಂಗಳೂರು(Mangaluru): ಪ್ರಧಾನಿ ನರೇಂದ್ರ ಮೋದಿಯವರು(PM Narendra Modi) ಮಂಗಳೂರು ಭೇಟಿಯ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ವೇಳೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಆಗಮಿಸುವವರು ಲೈಟರ್, ಮ್ಯಾಚ್‌ಬಾಕ್ಸ್, ಭಿತ್ತಿಪತ್ರ, ಬಾಟಲಿ, ಕಪ್ಪು ಬಟ್ಟೆ ತರಬಾರದು ಎಂದು ಎಡಿಜಿಪಿ(ADGP) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ಬಂದೋಬಸ್ತ್ ಕ್ರಮಗಳ ಮೇಲ್ವಿಚಾರಣೆ ನಡೆಸಲು ಮಂಗಳೂರಿನಲ್ಲಿರುವ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗಾರರ ಜತೆ ಮಾತನಾಡಿದರು.
ಕಪ್ಪು ಟಿಶರ್ಟ್ ಧರಿಸಬಾರದು. ಅದನ್ನು ದುರುಪಯೋಗಪಡಿಸುವ ಸಾಧ್ಯತೆ ಇದೆ ಎಂದು ಈ ಮೂಲಕ ಸೂಚನೆ ನೀಡಲಾಗುತ್ತಿದೆ. ಹೆಲಿಪ್ಯಾಡ್‌ನಿಂದ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಾರ್ವಜನಿಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಅನುಕೂಲವಾಗುವಂತೆ ಕ್ರಮ ವಹಿಸಲಾಗಿದೆ. ತುರ್ತು ಮಾರ್ಗಗಳು ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಅಂಶು ಕುಮಾರ್ ಉಪಸ್ಥಿತರಿದ್ದರು.
ಫಲ್ಗುಣಿ ನದಿಯಲ್ಲಿ ಪೊಲೀಸರಿಂದ ಗಸ್ತು
ನಾಳೆ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯಲಿರುವ ಗೋಲ್ಡ್ ಪಿಂಚ್ ಮೈದಾನದ ಸುತ್ತಮುತ್ತ ಸೇರಿದಂತೆ ಮಂಗಳೂರು ನಗರಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಈ ನಡುವೆ ಇಂದು ಸ್ಥಳೀಯ ಪೊಲೀಸರು ಕಾರ್ಯಕ್ರಮ ಸ್ಥಳದ ಬಳಿಯ ಕೂಳೂರು ಫಲ್ಗುಣಿ ನದಿಯಲ್ಲಿ ಪಹರೆ ಕಾರ್ಯ ನಡೆಸಿದರು.
ಇದನ್ನೂ ಓದಿ: ಮಂಗಳೂರು ಭೇಟಿಯ ಕುರಿತು ಕನ್ನಡದಲ್ಲಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ ಹೇಳಿದ್ದೇನು?








