ಮುರುಘಾ ಮಠದ ಆಡಳಿತಾಧಿಕಾರಿ ಹುದ್ದೆಯಿಂದ ಮಾಜಿ ಶಾಸಕ ಬಸವರಾಜನ್ ವಜಾ

ಚಿತ್ರದುರ್ಗ, ಸೆ.1: ಮುರುಘಾ ಮಠದ ಆಡಳಿತಾಧಿಕಾರಿ ಮಾಜಿ ಶಾಸಕ ಬಸವರಾಜನ್ ಅವರನ್ನುಮುರುಘಾ ಮಠದ ಆಡಳಿತಾಧಿಕಾರಿ ಮತ್ತು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ.
'ಬಸವರಾಜನ್ ಅವರನ್ನು ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ಆಡಳಿತಾಧಿಕಾರಿ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಗಳಿಂದ ದಿನಾಂಕ:26-08-2022ರಂದು ಬಿಡುಗಡೆಗೊಳಿಸಲಾಗಿದೆ ಎಂದು ಮುರುಘಾ ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಪ್ರಕಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕಿರುಕುಳ, ಬೆದರಿಕೆ ಆರೋಪ: ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್ ದಂಪತಿಗೆ ಜಾಮೀನು
ಬಸವರಾಜನ್ ಅವರು ಷರತ್ತುಗಳನ್ನು ಉಲ್ಲಂಘಿಸಿ ಮಠ ಹಾಗೂ ಪೀಠಾಧಿಪತಿ ಘನತೆ, ಗೌರವಕ್ಕೆ ಧಕ್ಕೆ ತರಲು ಒಳಸಂಚು ರೂಪಿಸಿದ್ದಾರೆ ಎಂದು ಮಠ ಆರೋಪಿಸಿದೆ.
'ಲಿಂಗಾಯತ-ವೀರಶೈವ ಮತ್ತು ವಿವಿಧ ಸಮಾಜಗಳ ಮುಖಂಡರ ಒತ್ತಾಸೆಯಂತೆ ಬಸವರಾಜನ್ ಅವರನ್ನು ಮಾರ್ಚ್ 7ರಂದು ಪುನರ್ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಮಠ ಮತ್ತು ಬಸವರಾಜನ್ ಅವರ ನಡುವಿನ ವ್ಯಾಜ್ಯಗಳನ್ನು ಮುಕ್ತಾಯಗೊಳಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಮೊದಲ ಹೆಜ್ಜೆಯಾಗಿ ನಗರದ ಕಾವೇರಿ ಸ್ಟೋರ್ಸ್ ಗೆ ಸಂಬಂಧಿಸಿದ ವ್ಯಾಜ್ಯವನ್ನು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ರಾಜಿಯೊಂದಿಗೆ ಇತ್ಯರ್ಥಗೊಳಿಸಿಕೊಳ್ಳಲಾಗಿತ್ತು. ಆದರೆ, ನಂತರದಲ್ಲಿ ಕರ್ತವ್ಯ ನಿರ್ವಹಣೆಯ ಬಗೆಗಿನ ಯಾವುದೇ ವರದಿಯನ್ನು/ವಿಚಾರಗಳನ್ನು ಕೂಡ ನಮ್ಮ ಗಮನಕ್ಕೆ ತರದೇ ಅನೇಕ ವಿಚಾರಗಳಲ್ಲಿ ತೊಡಕುಂಟುಮಾಡಿರುತ್ತಾರೆ' ಎಂದು ಮಠ ಆರೋಪಿಸಿದೆ.
'ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಅಮೆರಿಕ ಮತ್ತು ಮಾರಿಷಸ್ ಪ್ರವಾಸಗಳಲ್ಲಿರುವಾಗ ಮಠದ ವಿರೋಧಿ ಕೃತ್ಯದಲ್ಲಿ ತೊಡಗಿದ್ದರು. ಪೀಠಾಧ್ಯಕ್ಷರು ಹಲವು ಬಾರಿ ಸೂಚನೆ ನೀಡಿದರೂ ತಪ್ಪು ತಿದ್ದಿಕೊಳ್ಳಲಿಲ್ಲ' ಎಂದು ಪ್ರಕಟನೆಯಲ್ಲಿ ಮಾಹಿತಿ ನೀಡಲಾಗಿದೆ.
ನೂತನ ಕಾರ್ಯದರ್ಶಿ ನೇಮಕ?: ಎಸ್.ಜೆ.ಎಂ. ವಿದ್ಯಾಪೀಠದ ನೂತನ ಕಾರ್ಯದರ್ಶಿಯನ್ನಾಗಿ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸುವ ಸಂಭವ ಇದೆಯೆಂದು ಆಡಳಿತ ಮಂಡಳಿ ತಿಳಿಸಿರುತ್ತದೆ ಆದರೆ, ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.







