ವಿದ್ಯಾರ್ಥಿಗಳಲ್ಲಿ ಮೌಲ್ಯ ಮತ್ತು ಕಾಳಜಿ ಬೆಳೆಸುತ್ತಿರುವ ಕಮ್ಯೂನಿಟಿ ಸೆಂಟರಿನ ಕಾರ್ಯ ಶ್ಲಾಘನೀಯ: ಎ.ಬಿ. ಇಬ್ರಾಹಿಂ

ಪುತ್ತೂರು: ವಿದ್ಯಾರ್ಥಿಗಳ ಶೈಕ್ಷಣಿಕ ಗುರಿ ನಿಶ್ಚಯಿಸಲು ಕೌನ್ಸಿಲಿಂಗ್, ಅವರನ್ನು ನಿರಂತರ ಮಾನಿಟರಿಂಗ್ ಮಾಡುವ ಕಾಲ್ ಸೆಂಟರ್, ಅವರಲ್ಲಿ ವಿಷಯ ಪರಿಣತಿಯ ಜೊತೆಗೆ ಮೌಲ್ಯ ಮತ್ತು ಕಾಳಜಿ ಬೆಳೆಸುತ್ತಿರುವ ಕಮ್ಯೂನಿಟಿ ಸೆಂಟರಿನ ಪ್ರಯತ್ನ ಶ್ಲಾಘನೀಯ ಎಂದು ಮಾಜಿ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹೇಳಿದರು.
ಅವರು ಪುತ್ತೂರು ಕಮ್ಯೂನಿಟಿ ಸೆಂಟರಿನಲ್ಲಿ ಆಯೋಜಿಸಿದ ಸರಕಾರಿ ಇಲಾಖೆಗೆ ಸೇರಲು ಆಸಕ್ತಿ ಇರುವ ವಿದ್ಯಾರ್ಥಿಗಳ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿರಿಯರನ್ನು ಸ್ಮರಿಸುವ, ಅವರ ಸಾಮಾಜಿಕ, ಶೈಕ್ಷಣಿಕ ಸಾಧನೆಗಳಿಂದ ಸ್ಪೂರ್ತಿ ಪಡೆಯುವ ಹಾಗೂ ವಿದ್ಯಾರ್ಥಿಗಳಲ್ಲಿ ಅಧ್ಯಯನ ಆಸಕ್ತಿ ಬೆಳೆಸುವ ಪ್ರಯತ್ನಕ್ಕಾಗಿ ಕಮ್ಯೂನಿಟಿ ಸೆಂಟರ್ ಆಯೋಜಿಸಿದ ಮರ್ಹೂಂ ಮಮ್ಮುಞಿ ಹಾಜಿ ಪುತ್ತೂರು ಮತ್ತು ಮರ್ಹೂಂ ಯು.ಕೆ. ಇಬ್ರಾಹಿಂ ಹಾಜಿ ಉಳ್ಳಾಲ ಇವರ ಕುರಿತ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂಧಿಸಿ ವಿದ್ಯಾರ್ಥಿ ವೇತನ ವಿತರಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ಉದ್ಯೋಗದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಮಾತಾ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥರಾದ ಶ್ರೀ ಭಾಗ್ಯೇಶ್ ರೈ ಅವರು, ಸರಕಾರಿ ಉದ್ಯೋಗದ ಅವಕಾಶ, ಪ್ರವೇಶಾತಿ ಮತ್ತು ಅರ್ಹತಾ ಪರೀಕ್ಷೆ, ಅದಕ್ಕಿರುವ ಪೂರ್ವ ತಯಾರಿ ಮತ್ತು ಆಸಕ್ತಿಗಳನ್ನು ಬೆಳೆಸುವುದು ಹೇಗೆ ಎನ್ನುವುದರ ಕುರಿತು ಸಮರ್ಪಕ ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಎ.ಬಿ. ಇಬ್ರಾಹಿಂ ಮತ್ತು ನಿವೃತ್ತ ಎಸಿಎಫ್ ಮುಹಮ್ಮದ್ ಬ್ಯಾರಿಯವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ 'ಸರಕಾರಿ ಶಾಲೆಗಳನ್ನು ಉಳಿಸಿ ಆಂದೋಲನ'ದಲ್ಲಿ ದುಡಿಯುತ್ತಿರುವ ಮೊಯಿದ್ದೀನ್ ಕುಟ್ಟಿಯವರನ್ನು, ಕಮ್ಯೂನಿಟಿ ಸೆಂಟರಿನಲ್ಲಿ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿದ ರಫೀಕ್ ಮಾಸ್ಟರ್, ಸೆಂಟರಿಗೆ ಆರಂಭದಿಂದ ಸಹಕರಿಸುತ್ತಿರುವ ಮೌಲಾನ ಅಝಾದ್ ಶಾಲೆಯ ಅಧ್ಯಾಪಕರಾದ ಮಹಮ್ಮದ್ ತೌಸೀಫ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯೊಂದಿಗೆ ವಿದ್ಯಾರ್ಥಿಗಳ ಅಭಿವೃದ್ದಿಗೆ ದುಡಿಯುತ್ತಿರುವ ಮಕ್ಕಳ ರಕ್ಷಣಾಧಿಕಾರಿ ವಝೀರ್ ಅಹ್ಮದ್ ರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಆರ್.ಡಿ.ಎಫ್ ನ ಟ್ರಸ್ಟಿ ಸಂಶುದ್ದೀನ್ ಬೈರಿಕಟ್ಟೆ ವಹಿಸಿದ್ದರು.
ಕಾರ್ಯಕ್ರಮವನ್ನು ಹನೀಫ್ ಪುತ್ತೂರು ನಡೆಸಿಕೊಟ್ಟರು. ಸನ್ಮಾನ ಕಾರ್ಯಕ್ರಮವನ್ನು ನಝೀರ್ ಅವರು ನಡೆಸಿಕೊಟ್ಟರು. ಇಮ್ತಿಯಾಝ್ ಪಾರ್ಲೆ ವಂದಿಸಿದರು.

















