ಎಲ್ಲೈಸಿ ಉಡುಪಿ ವಿಭಾಗ ಕಚೇರಿಯಲ್ಲಿ ವಿಮಾ ಸಪ್ತಾಹ ಉದ್ಘಾಟನೆ
2021-22ನೇ ಸಾಲಿನ ಹೊಸ ಪಾಲಿಸಿ ಮಾರಾಟದಲ್ಲಿ ಶೇ.86 ಸಾಧನೆ

ಉಡುಪಿ: ಭಾರತೀಯ ಜೀವವಿಮಾ ನಿಗಮದ ಉಡುಪಿ ವಿಭಾಗೀಯ ಕಚೇರಿಯು 2021-22ನೇ ಸಾಲಿನಲ್ಲಿ ಹೊಸ ಪಾಲಿಸಿಯ ನಿಗದಿತ ಗುರಿಯಾದ 1.90 ಲಕ್ಷಗಳಲ್ಲಿ 1.64 ಲಕ್ಷ ಪಾಲಿಸಿಗಳನ್ನು ಮಾರಿ ಶೇ.86.3ರಷ್ಟು ಸಾಧನೆ ಮಾಡಿದೆ ಎಂದು ಉಡುಪಿ ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ಮುಧೋಳ್ ತಿಳಿಸಿದ್ದಾರೆ.
ಅಜ್ಜರಕಾಡಿನಲ್ಲಿರುವ ಎಲ್ಲೈಸಿ ಉಡುಪಿ ವಿಭಾಗೀಯ ಕಚೇರಿಯಲ್ಲಿ ಗುರುವಾರ ನಡೆದ 66ನೇ ವಿಮಾ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಕಳೆದ ಸಾಲಿನಲ್ಲಿ ಉಡುಪಿ ವಿಭಾಗೀಯ ಕಚೇರಿಯು 465ಕೋಟಿ ರೂ. ಪ್ರಥಮ ಪ್ರೀಮಿಯಂ ಸಂಗ್ರಹದ ಗುರಿಗೆ ಪ್ರತಿಯಾಗಿ 428 ಕೋಟಿ ರೂ.ಗಳನ್ನು ಸಂಗ್ರಹಿಸುವ ಮೂಲಕ ಶೇ.92ರಷ್ಟು ಸಾಧನೆ ಮಾಡಿದೆ. ಈ ವರ್ಷ 2022- 23ನೇ ಸಾಲಿನಲ್ಲಿ 1,92,000 ಪಾಲಿಸಿ ಮಾರಾಟದಿಂದ 520ಕೋಟಿ ರೂ. ಪ್ರೀಮಿಯಂ ಗಳಿಕೆಯ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದವರು ತಿಳಿಸಿದರು.
ಈ ವರ್ಷ ಈಗಾಗಲೇ ಎ.1ರಿಂದ ಆ.31ರ ಅವಧಿಯಲ್ಲಿ 54,137ಪಾಲಿಸಿ ಮಾರಾಟದಿಂದ 149ಕೋಟಿ ರೂ. ಪ್ರೀಮಿಯಂ ಸಂಗ್ರಹವಾಗಿದೆ ಎಂದವರು ನುಡಿದರು. ಉಡುಪಿ ವಿಭಾಗದಲ್ಲಿ 9300 ಪ್ರತಿನಿಧಿಗಳು, 112 ಅಭಿವೃದ್ಧಿ ಅಧಿಕಾರಿಗಳು, 730 ಸಿಬ್ಬಂದಿಗಳಿದ್ದಾರೆ. ವಿಭಾಗದಲ್ಲಿ 17 ಶಾಖೆಗಳು, ಎಂಟು ಉಪಶಾಖೆಗಳಿವೆ ಎಂದರು.
2021-22ನೇ ಸಾಲಿನಲ್ಲಿ ಉಡುಪಿ ವಿಭಾಗದ 7,515 ಡೆತ್ ಕ್ಲೇಮುಗಳಿಗೆ 118.9 ಕೋಟಿ ರೂ. ವಿತರಿಸಿದ್ದು, ಶೇ. 99.83ರಷ್ಟು ಕ್ಲೇಮುಗಳನ್ನು ವಿತರಿಸಲಾಗಿದೆ. 2022ರಲ್ಲಿ ಇದುವರೆಗೆ 2,476ಡೆತ್ ಕ್ಲೇಮುಗಳನ್ನು ನಿಭಾಯಿಸಿ 39.24 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ರಾಜೇಶ್ ಮುಧೋಳ್ ತಿಳಿಸಿದರು.
2021-22ರಲ್ಲಿ ಅವಧಿ ಮುಗಿದ 50,081 ಪಾಲಿಸಿಗಳಿಗೆ 382.51ಕೋಟಿ ರೂ. ನೀಡಲಾಗಿದೆ.ಪಾಲಿಸಿ ಮಾರಾಟದಲ್ಲಿ ಉಡುಪಿ ವಿಭಾಗೀಯ ಕಚೇರಿಯು ವಲಯ ಮಟ್ಟದಲ್ಲಿ 5ನೇ ಸ್ಥಾನ, ಪ್ರೀಮಿಯಂ ಆದಾಯದಲ್ಲಿ ಆರನೇ ಸ್ಥಾನ ಗಳಿಸಿದೆ ಎಂದರು.
ಖಾಸಗಿ ವಿಮಾ ಸಂಸ್ಥೆಗಳ ಪೈಪೋಟಿಯ ಹೊರತಾಗಿಯೂ ಎಲ್ಲೈಸಿ ಇಂಡಿಯಾ ಕ್ಷೇತ್ರದಲ್ಲಿ ತನ್ನ ಅದ್ವಿತೀಯ ಸಾಧನೆಯನ್ನು ಕಾಯ್ದುಕೊಂಡಿದೆ. ದೇಶದಲ್ಲಿ ಪಾಲಿಸಿ ಮಾರಾಟದಲ್ಲಿ ಶೇ.74.60 ಪಾಲು ಎಲ್ಲೈಸಿಯದ್ದಾಗಿದ್ದರೆ, ಪ್ರೀಮಿಯಂ ಸಂಗ್ರಹದಲ್ಲಿ ಶೇ. 68.57ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
ಪಾಲಿಸಿ ಅವಧಿ ತೀರಿದ ಬಳಿಕ ಸಕಾಲದಲ್ಲಿ ಕ್ಲೈಮು ಮಾಡದಿದ್ದರೆ ಆ ಪಾಲಿಸಿಗೆ 10 ವರ್ಷಗಳ ಕಾಲ ಬಡ್ಡಿ ನೀಡಲಾಗುತ್ತದೆ. ಬಳಿಕ ಪಾಲಿಸಿಯಿಂದ ಬರಬೇಕಾದ ಮೊತ್ತವನ್ನು ಸೀನಿಯರ್ ಸಿಟಿಝನ್ ವೆಲ್ಛೇರ್ ಂಡಿಗೆ ವರ್ಗಾಯಿಸಲಾಗುತ್ತದೆ. ಹಳೆ ಪಾಲಿಸಿಗಳ ಪುನರುಜ್ಜೀವನ ಅಭಿಯಾನವು ಉಡುಪಿ ವಿಭಾಗೀಯ ವ್ಯಾಪ್ತಿಯಲ್ಲಿ ಸೆ. 17ರಿಂದ 21ರ ತನಕ ನಡೆಯಲಿದೆ ಎಂದರು.
2022ರಲ್ಲಿ ಧನಸಂಚಯ, ಭಿಮಾರತ್ನ ಎಂಬ ನೂತನ ಪಾಲಿಸಿಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಎಲ್‌ಐಸಿಯ 33 ಪಾಲಿಸಿಗಳು ಅಸ್ತಿತ್ವದಲ್ಲಿವೆ. ದೇಶದಲ್ಲಿ ಎಂಟು ವಲಯ ಕಚೇರಿ, 113 ವಿಭಾಗೀಯ ಕಚೇರಿ, 73 ಗ್ರಾಹಕರ ವಲಯ, 2048 ಶಾಖಾ ಕಚೇರಿ, 1564 ಉಪಕಚೇರಿ, 44,900 ಪ್ರೀಮಿಯಂ ಪಾಯಿಂಟ್‌ಗಳಿವೆ ಎಂದರು.
ವಿಮಾ ಸಪ್ತಾಹ ಉದ್ಘಾಟನೆ
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಭಾರತೀಯ ಜೀವವಿಮಾ ನಿಗಮದ ಉಡುಪಿ ವಿಭಾಗೀಯ ಕಚೇರಿ ವತಿಯಿಂದ 66ನೇ ವಿಮಾ ಸಪ್ತಾಹ ಗುರುವಾರ ಆರಂಭವಾಗಿದ್ದು, ಸೆ.7ರ ತನಕ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರಾಜೇಶ್ ಮುಧೋಳ್ ತಿಳಿಸಿದರು.
ವಿಮಾ ಸಪ್ತಾಹದ ಅವಧಿಯಲ್ಲಿ ಉದ್ಯೋಗಿಗಳಿಗೆ ಸ್ಪರ್ಧೆ, ಸರಕಾರಿ ಆಸ್ಪತ್ರೆ, ವೃದ್ಧಾಶ್ರಮ, ಆನಾಥಾಶ್ರಮಗಳಿಗೆ ಆಹಾರ ಹಾಗೂ ಸಲಕರಣೆಗಳ ವಿತರಣೆ ಮಾಡಲಾಗುವುದು ಎಂದರು. ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ರಾಜಗೋಪಾಲ್ ವಿಮಾ ಸಪ್ತಾಹವನ್ನು ಉದ್ಘಾಟಿಸಿದರು. ಮಾರುಕಟ್ಟೆ ವ್ಯವಸ್ಥಾಪಕ ರಮೇಶ್ ಭಟ್ ಉಪಸ್ಥಿತರಿದ್ದರು.







