ಲೈಂಗಿಕ ದೌರ್ಜನ್ಯ ಆರೋಪ: ಮುರುಘಾಶ್ರೀ ಬಂಧನಕ್ಕೆ ದಸಂಸ ಆಗ್ರಹ

ಉಡುಪಿ: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಪೋಕ್ಸೊ ಕೇಸು ದಾಖಲಾಗಿದ್ದು, ದಲಿತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯಕ್ಕಾಗಿ ಎಟ್ರಾಸಿಟಿ ಪ್ರಕರಣ ದಾಖಲಾಗಿದೆ. ಆದುದರಿಂದ ತಕ್ಷಣವೇ ಮುರುಘಾಶ್ರೀಗಳನ್ನು ಬಂಧಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಸುಂದರ್ ಮಾಸ್ಕರ್ ಒತ್ತಾಯಿಸಿದ್ದಾರೆ.
ಈ ಪ್ರಕರಣಗಳಲ್ಲಿ ಕೇಸು ದಾಖಲಾದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕಾಗಿತ್ತು. ಆದರೆ ಸ್ವಾಮೀಜಿ ವಿರುದ್ಧ ಇಂಥ ಕಟ್ಟುನಿಟ್ಟಿನ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡ ರಾಜ್ಯ ಸರಕಾರ ಆರೋಪಿಯ ಪರ ನಿಂತಂತಿದ್ದು, ಗೃಹ ಸಚಿವರೇ ಆರೋಪಿ ಸ್ವಾಮಿ ನಿರಪರಾಧಿ ಎಂಬ ಅರ್ಥದಲ್ಲಿ ಹೇಳಿಕೆ ನೀಡಿ ಪೊಲೀಸ್ ಇಲಾಖೆ ನಿಷ್ಪಕ್ಷವಾಗಿ ಕರ್ತವ್ಯ ನಿರ್ವಹಿಸದಂತೆ ಮಾಡಿರುವುದನ್ನು ಸುಂದರ್ ಮಾಸ್ತರ್ ತೀವ್ರವಾಗಿ ಖಂಡಿಸಿದ್ದಾರೆ.
ಅಲ್ಲದೆ ಬಿಲ್ಕಿಸ್ ಬಾನು ಅತ್ಯಾಚಾರ ಎಸಗಿರುವ ಆರೋಪಿಗಳನ್ನು ಬಿಡುಗಡೆ ಗೊಳಿಸಿರುವ ಕ್ರಿಮಿನಲ್ ಸಂಸ್ಕೃತಿಯನ್ನು ಸಂಘಟನೆ ವಿರೋಧಿಸುತ್ತದೆ. ಇನ್ನೆರಡು ದಿನಗಳಲ್ಲಿ ಸ್ವಾಮೀಜಿಯ ಮೇಲೆ ದಾಖಲಾಗಿರುವ ಪೋಕ್ಸೊ ಮತ್ತು ಎಟ್ರಾಸಿಟಿ ಕಾಯ್ದೆಯಡಿ ಬಂಧಿಸದಿದ್ದಲ್ಲಿ ಎಸ್ಪಿ ಕಚೇರಿ ಎದುರು ದಸಂಸದಿಂದ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್‌ದಾಸ್ ಬಿರ್ತಿ, ಭಾಸ್ಕರ್ ಪುತ್ತೂರು, ಶ್ಯಾಮ್‌ಸುಂದರ್ ತೆಕ್ಕಟ್ಟೆ, ಪರಮೇಶ್ವರ ಉಪ್ಪೂರು, ಮಂಜುನಾಥ ಬಾಳ್ಕುದ್ರು, ಅಣ್ಣಪ್ಪ ನಕ್ರೆ, ಶ್ರೀಧರ ಕುಂಜಿಬೆಟ್ಟು, ತಾಲೂಕು ಸಂಚಾಲಕರಾದ ಶಂಕರ್‌ದಾಸ್ ಉಡುಪಿ, ನಾಗರಾಜ ಕುಂದಾಪುರ ತಾಲೂಕು, ರಾಘವ ಕಾರ್ಕಳ ತಾಲೂಕು, ವಿಠಲ ಕಾಪು ತಾಲೂಕು, ಶ್ರೀನಿವಾಸ, ದೇವು ಬ್ರಹ್ಮಾವರ ತಾಲೂಕು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







