ಬಿಜೆಪಿಯ ‘ಆಪರೇಷನ್ ಕಮಲ ’ದ ವಿರುದ್ಧ ಆಪ್ ದೂರನ್ನು ಸ್ವೀಕರಿಸಿದ ಸಿಬಿಐ: ಶಾಸಕರು

PHOTO : PINANCIAL EXPRESS
ಹೊಸದಿಲ್ಲಿ,ಸೆ.1: ತಾವು ಬುಧವಾರ ಇಲ್ಲಿಯ ಸಿಬಿಐ ಕೇಂದ್ರಕಚೇರಿಯ ಎದುರು ಸುಮಾರು ಎರಡು ಗಂಟೆಗಳ ಕಾಲ ಧರಣಿ ಕುಳಿತ ಬಳಿಕ ಬಿಜೆಪಿಯ ‘ಆಪರೇಷನ್ ಕಮಲ’ದ ವಿರುದ್ಧ ತಮ್ಮ ದೂರನ್ನು ಕೇಂದ್ರ ತನಿಖಾ ಸಂಸ್ಥೆಯು ಸ್ವೀಕರಿಸಿದೆ ಎಂದು ಪಕ್ಷದ ಶಾಸಕರು ತಿಳಿಸಿದರು. ಪ್ರತಿಭಟನೆಯ ನಡುವೆ ಕೆಲವು ಸಿಬಿಐ ಅಧಿಕಾರಿಗಳು ದಿಲ್ಲಿ ವಿಧಾನಸಭೆಯಲ್ಲಿ ಆಪ್ನ ಮುಖ್ಯ ಸಚೇತಕ ದಿಲೀಪ್ ಕೆ.ಪಾಂಡೆ ಮತ್ತು ಕಲ್ಕಾಜಿ ಶಾಸಕಿ ಅತಿಷಿ ಅವರನ್ನು ಕಚೇರಿಯ ಆವರಣದೊಳಗೆ ಕರೆದೊಯ್ದಿದ್ದರು. ‘ಕೊನೆಗೂ ನಾವು ದೂರನ್ನು ಸಲ್ಲಿಸಿದ್ದೇವೆ ಮತ್ತು ಅದಕ್ಕಾಗಿ ಹಿಂಬರೆಹವನ್ನೂ ಪಡೆದುಕೊಂಡಿದ್ದೇವೆ. ಆದರೆ 10 ಚುನಾಯಿತ ಜನಪ್ರತಿನಿಧಿಗಳು ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲಿ ಕಾಯುವಂತೆ ಮಾಡಿದ್ದು ಮತ್ತು ಯಾವುದೇ ಅಧಿಕಾರಿಗಳು ನಮ್ಮನ್ನು ಭೇಟಿಯಾಗದ್ದು ಅತ್ಯಂತ ದುರದೃಷ್ಟಕರವಾಗಿದೆ ’ ಎಂದು ಅತಿಷಿ ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ವಿರುದ್ಧ ದೂರು ಬಂದರೆ ಸಿಬಿಐ ಹೆದರುತ್ತಿರುವಂತೆ ಕಾಣುತ್ತಿದೆ ಎಂದ ಅವರು,‘ಬಿಜೆಪಿಯು ಈವರೆಗೆ ದೇಶಾದ್ಯಂತ 277 ಶಾಸಕರನ್ನು ಖರೀದಿಸಿದೆ ಮತ್ತು ಇದಕ್ಕಾಗಿ ಅಂದಾಜು 6,300 ಕೋ.ರೂ.ಗಳನ್ನು ವ್ಯಯಿಸಿದೆ ಹಾಗೂ ದಿಲ್ಲಿಯ 40 ಆಪ್ ಶಾಸಕರನ್ನು ಖರೀದಿಸಲೂ ಬಿಜೆಪಿ ಸಿದ್ಧತೆಗಳನ್ನು ನಡೆಸಿತ್ತು,ಹೀಗಾಗಿ ಸಿಬಿಐ ಈ ಬಗ್ಗೆ ತನಿಖೆ ನಡೆಸಬೇಕು ಎಂದು ನಾವು ದೂರಿನಲ್ಲಿ ತಿಳಿಸಿದ್ದೇವೆ ’ ಎಂದೂ ಅವರು ಹೇಳಿದರು.
ಬಿಜೆಪಿಯು ಹೇಗೆ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ ಮತ್ತು ಶಾಸಕರನ್ನು ಖರೀದಿಸಿ ಇತರ ಪಕ್ಷಗಳ ಸರಕಾರಗಳನ್ನು ಹೇಗೆ ಅಸ್ಥಿರಗೊಳಿಸಿದೆ ಎನ್ನುವುದನ್ನು ಆಪ್ ಶಾಸಕರಿಂದ ತಿಳಿದುಕೊಳ್ಳಲು ಸಿಬಿಐನ ಯಾವುದೇ ಅಧಿಕಾರಿ ಕಾಳಜಿ ವಹಿಸಿರಲಿಲ್ಲ ಎಂದು ಆರೋಪಿಸಿದ ಪಾಂಡೆ,‘‘ಆದಾಗ್ಯೂ ಸಿಬಿಐ ನಮ್ಮ ದೂರಿನ ಕುರಿತು ತಕ್ಷಣವೇ ತನಿಖೆಯನ್ನು ಆರಂಭಿಸುತ್ತದೆ ಮತ್ತು ಬಿಜೆಪಿಯ ‘ಆಪರೇಷನ್ ಕಮಲ ’ದ ಸತ್ಯವನ್ನು ದೇಶದ ಮುಂದೆ ಬಿಚ್ಚಿಡುತ್ತದೆ ಎಂದು ನಾವು ಆಶಿಸಿದ್ದೇವೆ. ನಾವು ದೂರಿನ ಬಗ್ಗೆ ನಿತ್ಯ ಪರಿಶೀಲಿಸುತ್ತೇವೆ ಮತ್ತು ತನಿಖಾ ಪ್ರಗತಿಯ ಕುರಿತು ಅವರನ್ನು ಕೇಳುತ್ತೇವೆ ’’ ಎಂದರು.







