ಪುದು ಮಾಪ್ಳ ಶಾಲೆಯ ಮಾದರಿ ಅಭಿವೃದ್ಧಿಗೆ ಯು.ಟಿ.ಖಾದರ್ ಶ್ಲಾಘನೆ

ಬಂಟ್ವಾಳ: ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗೂ ಮೀರಿಸಿ ಬೆಳೆಸಬಹುದು ಎಂಬುದಕ್ಕೆ ಪುದು ಮಾಪ್ಳ ಸರಕಾರಿ ಶಾಲೆ ಮಾದರಿಯಾಗಿದ್ದು ಇದರ ಹಿಂದಿರುವ ಟುಡೇ ಫೌಂಡೇಶನ್ ಗೆ ಶ್ಲಾಘನೆ ವ್ಯಕ್ತಪಡಿಸುತ್ತೇನೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಪುದು ಮಾಪ್ಳ ಶಾಲೆಯ ಅವರಣದಲ್ಲಿ ಶಾಸಕರ ಐದು ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎನ್.ಆರ್.ಇ.ಜಿ. ಮತ್ತು ಇತರ ಅನುದಾನದ ಮೂಲಕ ನೂತನವಾಗಿ ನಿರ್ಮಾಣವಾಗಲಿರುವ ಅಂಗನವಾಡಿ ಕೇಂದ್ರಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳ ಸಂಖ್ಯೆ ಕಡಿಮೆಯಾಗಿ ಮುಚ್ಚುವ ಹಂತಕ್ಕೆ ತಲುಪಿಸಿದ್ದ ಈ ಶಾಲೆಯಲ್ಲಿ ಇಂದು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಮನವಿಯನ್ನು ಸ್ವೀಕರಿಸಿದ್ದು ಎಲ್ಲವನ್ನು ಆದ್ಯತೆಯ ನೆಲೆಯಲ್ಲಿ ಹಂತಹಂತವಾಗಿ ಮಾಡಲಾಗುವುದು ಎಂದು ಅವರು ಹೇಳಿದರು.
ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ತರಗತಿಗಳ ನಿರ್ಮಾಣದ ಬಗ್ಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ನಾಲ್ಕು ತರಗತಿ ಕೊಠಡಿ ನಿರ್ಮಾಣಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಮಂಗಳೂರು ಕ್ಷೇತ್ರದಲ್ಲಿ ಅಂಗನವಾಡಿ ಕಟ್ಟಡಗಳಿಗೆ ಸ್ಥಳೀಯ ಗ್ರಾಪಂ ಮೂಲಕ ಎನ್.ಆರ್.ಇ.ಜಿ.ಯಿಂದ ಐದು ಲಕ್ಷ ರೂ. ಅನುದಾನ ಇರಿಸದರೆ ತನ್ನ ನಿಧಿಯಿಂದ ರೂ. ಐದು ಲಕ್ಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ಕಿಶೋರ್ ಸುಜೀರ್, ಝಹೀರ್ ಅಬ್ಬಾಸ್, ಮುಹಮ್ಮದ್ ಮೋನು, ಹುಸೈನ್ ಪಾಡಿ, ಬಾಸ್ಕರ್ ರೈ, ಮೇರಮಜಲು ಗ್ರಾಪಂ ಸದಸ್ಯೆ ವೃಂದಾ ಪೂಜಾರಿ, ಪ್ರಮುಖರಾದ ಇಸ್ಮಾಯೀಲ್, ಮಜೀದ್, ಆಸೀಫ್ ಇಕ್ಬಾಲ್, ಸಿಡಿಪಿಒ ಗಾಯತ್ರಿ ಕಂಬಳಿ, ಪಿಡಿಒ ಹರೀಶ್, ಶಾಲಾ ಮುಖ್ಯ ಶಿಕ್ಷಕಿ ಶಕುಂತಲಾ, ಪುದು ಮಾಪ್ಲ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ರಮ್ಲಾನ್ ಕುಂಪಣಮಜಲು, ಇಂಜಿನಿಯರ್ ರವಿಕುಮಾರ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.








