ಗುಲಾಂ ನಬಿ ಆಝಾದ್ ರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕ ಭೂಪಿಂದರ್ ಹೂಡಾ ವಿರುದ್ಧ ವಾಗ್ದಾಳಿ

ಚಂಡಿಗಡ,ಸೆ.1: ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ನಾಯಕತ್ವವನ್ನು ಟೀಕಿಸಿ ಪಕ್ಷವನ್ನು ತೊರೆದಿರುವ ಗುಲಾಂ ನಬಿ ಆಝಾದ್ರನ್ನು ಭೇಟಿಯಾಗಿದ್ದಕ್ಕೆ ತೀವ್ರ ಕಳವಳಗಳನ್ನು ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ಅವರು,ಹೂಡಾರ ನಡೆಯು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮತ್ತು ನಿರಾಶೆಯನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲೂಸಿ)ಯ ಸದಸ್ಯೆ ಹಾಗೂ ಪಕ್ಷದ ಹರ್ಯಾಣ ಘಟಕದ ಮಾಜಿ ಅಧ್ಯಕ್ಷೆಯಾಗಿರುವ ಸೆಲ್ಜಾ ರಾಜ್ಯದಲ್ಲಿ ಪ್ರತಿಪಕ್ಷ ನಾಯಕರೂ ಆಗಿರುವ ಹೂಡಾ ವಿರುದ್ಧ ಪಕ್ಷದ ಹೈಕಮಾಂಡ್ಗೆ ದೂರು ಸಲ್ಲಿಸಿದ್ದಾರೆ ಮತ್ತು ಅವರಿಗೆ ಶೋಕಾಸ್ ನೋಟಿಸ್ ಹೊರಡಿಸುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ಹೂಡಾ ಅವರಲ್ಲದೆ,ಜಿ-23 ಗುಂಪಿನ ಇತರ ಇಬ್ಬರು ಸದಸ್ಯರಾದ ಆನಂದ ಶರ್ಮಾ ಮತ್ತು ಪೃಥ್ವಿರಾಜ ಚವಾಣ್ ಅವರೂ ಮಂಗಳವಾರ ದಿಲ್ಲಿಯ ಆಝಾದ್ರ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದರು.
ಸೆಲ್ಜಾ ವಿಷಯವನ್ನು ಎಐಸಿಸಿ ಹರ್ಯಾಣ ಉಸ್ತುವಾರಿ ವಿವೇಕ ಬನ್ಸಾಲ್ ಸೇರಿದಂತೆ ಪಕ್ಷದ ಕೆಲವು ಹಿರಿಯ ನಾಯಕರೊಂದಿಗೆ ಪ್ರಸ್ತಾಪಿಸಿದ್ದಾರೆ.
ಗುರುವಾರ ಸುದ್ದಿಸಂಸ್ಥೆಯ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸೆಲ್ಜಾ,ಅವರು (ಆಝಾದ್) ತನ್ನ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಪಕ್ಷವನ್ನು ತೊರೆದಿದ್ದಾರೆ. ಆದರೆ ಅವರು ಪಕ್ಷವನ್ನು ತೊರೆದು ತನ್ನದೇ ಪಕ್ಷವನ್ನು ಸ್ಥಾಪಿಸುವುದಾಗಿ ಈಗಾಗಲೇ ಪ್ರಕಟಿಸಿರುವಾಗ ಹೂಡಾ ಅವರನ್ನು ಭೇಟಿಯಾಗುವುದರಲ್ಲಿ ಯಾವ ಅರ್ಥವಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನ ಪುನಃಶ್ಚೇತನ ಮತ್ತು ಎಲ್ಲ ಮಟ್ಟಗಳಲ್ಲಿ ಚುನಾವಣೆಗಳಿಗಾಗಿ ಆಗ್ರಹಿಸಿ 2020ರ ಆಗಸ್ಟ್ನಲ್ಲಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದ ಜಿ-23 ನಾಯಕರಲ್ಲಿ ಹೂಡಾ ಒಬ್ಬರಾಗಿದ್ದರು.
ಹೂಡಾ ಶರ್ಮಾ ಮತ್ತು ಚವಾಣ ಅವರೊಂದಿಗೆ ಸೇರಿಕೊಂಡು ಜಿ-23ರ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಆಝಾದ್ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ ಪಕ್ಷವು ಕಳೆದ ಎಪ್ರಿಲ್ನಲ್ಲಿ ಹರ್ಯಾಣ ಘಟಕದ ಮುಖ್ಯಸ್ಥರಾಗಿದ್ದ ಸೆಲ್ಜಾರ ಸ್ಥಾನಕ್ಕೆ ಮಾಜಿ ಶಾಸಕ ಹಾಗೂ ಹೂಡಾ ನಿಷ್ಠ ಉದಯ ಭಾನ್ ಅವರನ್ನು ನೇಮಕಗೊಳಿಸಿತ್ತು ಮತ್ತು ಸೆಲ್ಜಾರನ್ನು ಸಿಡಬ್ಲೂಸಿ ಸದಸ್ಯೆಯನ್ನಾಗಿ ಮಾಡಿತ್ತು.
ಹೂಡಾರ ಪುತ್ರ ದೀಪೇಂದರ್ ಸಿಂಗ ಹೂಡಾ ರಾಜ್ಯಸಭಾ ಸದಸ್ಯರಾಗಿದ್ದಾರೆ.







