ಭೂಗತ ಪಾತಕಿ ಗೋಲ್ಡಿ ಬ್ರಾರ್ ಗಾಯಕ ಮೂಸೆವಾಲ ಹತ್ಯೆ ಹಿಂದಿನ ಸೂತ್ರದಾರ: ಪಂಜಾಬ್ ಪೊಲೀಸ್ ಆರೋಪ ಪಟ್ಟಿ

ಚಂಡಿಗಢ, ಸೆ. 1: ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯ ಹಿಂದಿನ ಸೂತ್ರದಾರ ಕೆನಡಾ ಮೂಲದ ಭೂಗತ ಪಾತಕಿ ಗೋಲ್ಡಿ ಬ್ರಾರ್. ಆತ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ, ಜಗ್ಗು ಭಗ್ವಾನ್‌ಪುರಿಯ ಹಾಗೂ ಇತರೊಂದಿಗೆ ಸೇರಿ ಈ ವರ್ಷದ ಆರಂಭದಲ್ಲಿ ಸಿಧು ಮೂಸೆವಾಲ ಅವರ ಹತ್ಯೆ ನಡೆಸಿದ್ದಾನೆ ಎಂದು ಪಂಜಾಬ್ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.
ಸಿಧು ಮೂಸೆವಾಲಾ ಎಂದು ಜನಪ್ರಿಯರಾಗಿದ್ದ ಶುಭ್‌ದೀಪ್ ಸಿಂಗ್ ಸಿಧು ಅವರನ್ನು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೇ 29ರಂದು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.
ಸಿಧು ಮೂಸೆವಾಲ ಅವರು ತನ್ನ ಗೆಳೆಯ ಹಾಗೂ ಸೋದರ ಸಂಬಂಧಿಯೊಂದಿಗೆ ಮಾನ್ಸಾದಲ್ಲಿರುವ ಜವಾರ್‌ಕೆ ವಿಲೇಜ್‌ಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಈ ಹತ್ಯೆಯ ಹೊಣೆಯನ್ನು ಲಾರನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯ ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದ.
ಪ್ರಕರಣಕ್ಕೆ ಸಂಬಂಧಿಸಿ 24 ಆರೋಪಿಗಳ ವಿರುದ್ದ ಪಂಜಾಬ್ ಪೊಲೀಸರು ಮಾನ್ಸಾ ನ್ಯಾಯಾಲಯದಲ್ಲಿ ಆಗಸ್ಟ್ 26ರಂದು ಮೊದಲ ಬಾರಿಗೆ 1850 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ.







