ಮಂಗಳೂರು | ಪ್ರಧಾನಿಯಿಂದ 3,800 ಕೋಟಿ ರೂ. ಮೊತ್ತದ ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ
ಶ್ರೀಕೃಷ್ಣ, ಪರಶುರಾಮನ ಮೂರ್ತಿ ನೀಡಿ ಪ್ರಧಾನಿಗೆ ಸ್ವಾಗತ

ಮಂಗಳೂರು, ಸೆ.2: ನಗರ ಹೊರವಲಯದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿಂದು ಇಂದು ಮಧ್ಯಾಹ್ನ ಜರುಗಿದ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) 3,800 ಕೋಟಿ ರೂ. ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದರು.
ಇದೇವೇಳೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಪ್ರಧಾನಿ ಸಾಂಕೇತಿಕವಾಗಿ ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಹಾರ, ಪೇಟ ತೊಡಿಸಿ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಸ್ವಾಗತಿಸಿದರು. ಉಡುಪಿ ಶ್ರೀಕೃಷ್ಣನ ವಿಗ್ರಹವನ್ನು ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದರೆ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ಪರಶುರಾಮನ ಮೂರ್ತಿ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೋ ನಾಯಕ್ ಹಾಗೂ ಶಂತನು ಠಾಕೂರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಪ್ರಧಾನಿ ಲೋಕಾರ್ಪಣೆ ಮಾಡಿರುವ ಯೋಜನೆಗಳು ಇಂತಿವೆ
ಕಂಟೈನರ್‌ಗಳು ಹಾಗೂ ಇತರ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14 ರ ಯಾಂತ್ರೀಕರಣ (ರೂ. 281 ಕೋಟಿ), ಬಿಎಸ್6 ಉನ್ನತೀಕರಣ ಯೋಜನೆ (ರೂ. 1829 ಕೋಟಿ), ಸಮುದ್ರ ನೀರಿನ ಶುದ್ಧೀಕರಣ ಘಟಕ (ರೂ. 677 ಕೋಟಿ) ಗಳು ಸೇರಿವೆ. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ, ಎನ್‌ಎಂಪಿಟಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ (ಅಂದಾಜು ವೆಚ್ಚ ರೂ. 500 ಕೋಟಿ), ಶೇಖರಣಾ ಟ್ಯಾಂಕ್‌ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ (ರೂ. 100 ಕೋಟಿ), ಬಿಟುಮಿನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ (ರೂ. 100 ಕೋಟಿ) ಹಾಗೂ ಬಿಟುಮಿನ್, ಖಾದ್ಯ ತೈಲ ಶೇಖರಣಾ ಟ್ಯಾಂಕರ್ ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ (ರೂ. 100 ಕೋಟಿ) ಕಾಮಗಾರಿಗಳಿಗೆ ಶಿಲಾನ್ಯಾಸ. ಜೊತೆಗೆ, ಕುಳಾಯಿಯಲ್ಲಿನ ಇಪಿಸಿ ಮಾದರಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ.
