ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಮಾಜಿ ಆಟಗಾರ ಕಲ್ಯಾಣ್ ಚೌಬೆ ಆಯ್ಕೆ
ಉಪಾಧ್ಯಕ್ಷರಾಗಿ ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್

ಅಜಯ್ ಕಿಪಾ | ಕಲ್ಯಾಣ್ ಚೌಬೆ | ಎನ್.ಎ. ಹ್ಯಾರಿಸ್
ಹೊಸದಿಲ್ಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ನ 85 ವರ್ಷಗಳ ಇತಿಹಾಸದಲ್ಲಿ ಅದರ ಮಾಜಿ ಆಟಗಾರ ಮೊದಲ ಬಾರಿಗೆ ಅದರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಭೈಚುಂಗ್ ಭುಟಿಯಾ ಅವರನ್ನು ಸೋಲಿಸಿದ ಕಲ್ಯಾನ್ ಚೌಬೆ ಎಐಎಫ್ಎಫ್ ನ ನೂತನ ಅಧ್ಯಕ್ಷರಾಗಿದ್ದಾರೆ.
ಗೋಲ್ ಕೀಪರ್ ಆಗಿ ಆಡಿದ್ದ 45ರ ಹರೆಯದ ಚೌಬೆ ಅವರು 33-1 ಅಂತರದಿಂದ ಗೆದ್ದಿದ್ದಾರೆ. ರಾಜ್ಯ ಅಸೋಸಿಯೇಷನ್ ಪ್ರತಿನಿಧಿಗಳಿಂದ ಕೂಡಿದ 34 ಸದಸ್ಯರ ಮತದಾರರ ಪಟ್ಟಿಯಲ್ಲಿ ಮಾಜಿ ನಾಯಕ ಭುಟಿಯಾ ಅವರಿಗೆ ಹೆಚ್ಚಿನ ಬೆಂಬಲಿಗರು ಇಲ್ಲದ ಕಾರಣ ಈ ಫಲಿತಾಂಶ ನಿರೀಕ್ಷಿತವಾಗಿತ್ತು.
ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಲ್ಲಿ ಕಳೆದ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚೌಬೆ ಸೋತಿದ್ದರು. ಚೌಬೆ ಅವರು ಕೆಲವು ಸಂದರ್ಭಗಳಲ್ಲಿ ತಂಡದ ಭಾಗವಾಗಿದ್ದರೂ, ಭಾರತೀಯ ಹಿರಿಯ ತಂಡಕ್ಕಾಗಿ ಎಂದಿಗೂ ಆಡಿರಲಿಲ್ಲ.
ಆದಾಗ್ಯೂ ಅವರು ವಯೋಮಿತಿಯ ಪಂದ್ಯಾವಳಿಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರು ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ಪರ ಗೋಲ್ ಕೀಪರ್ ಆಗಿ ಆಡಿದ್ದಾರೆ. ಪರಾಜಿತ ಅಭ್ಯರ್ಥಿ ಭುಟಿಯಾ ಮತ್ತು ಚೌಬೆ ಒಂದು ಕಾಲದಲ್ಲಿ ಪೂರ್ವ ಬಂಗಾಳದಲ್ಲಿ ತಂಡದ ಸಹ ಆಟಗಾರರಾಗಿದ್ದರು.
ಕರ್ನಾಟಕ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ, ಹಾಲಿ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಜಸ್ಥಾನ ಫುಟ್ಬಾಲ್ ಅಸೋಸಿಯೇಷನ್ ನ ಮನ್ವೇಂದ್ರ ಸಿಂಗ್ ಅವರನ್ನು 29-5 ಅಂತರದಿಂದ ಸೋಲಿಸಿದರು.
ಅರುಣಾಚಲ ಪ್ರದೇಶದ ಕಿಪಾ ಅಜಯ್ ಅವರು ಆಂಧ್ರಪ್ರದೇಶದ ಗೋಪಾಲಕೃಷ್ಣ ಕೊಸರಾಜು ಅವರನ್ನು 32-1 ಅಂತರದಿಂದ ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಅಷ್ಟೂ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ 14 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
ಜಿ ಪಿ ಪಾಲ್ಗುಣ, ಅವಿಜಿತ್ ಪಾಲ್, ಪಿ ಅನಿಲಕುಮಾರ್, ವಲಂಕ ನತಾಶಾ ಅಲೆಮಾವೊ, ಮಾಲೋಜಿ ರಾಜೇ ಛತ್ರಪತಿ, ಮೆನ್ಲಾ ಎಥೆನ್ಪಾ, ಮೋಹನ್ ಲಾಲ್, ಆರಿಫ್ ಅಲಿ, ಕೆ ನೆಬೌ ಸೆಖೋಸ್, ಲಾಲ್ಘಿಂಗ್ಲೋವಾ ಹ್ಮಾರ್, ದೀಪಕ್ ಶರ್ಮಾ, ವಿಜಯ್ ಬಾಲಿ ಮತ್ತು ಸೈಯದ್ ಇಮ್ತಿಯಾಜ್ ಹುಸೇನ್ ಹೊಸ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ.







