ಸೆ.6ರಂದು ಡಾ.ವಿವೇಕ ರೈಗೆ ಗೋವಿಂದ ಪೈ ಪ್ರಶಸ್ತಿ ಪ್ರದಾನ

ಉಡುಪಿ, ಸೆ.2: ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆ.6ರ ಮಂಗಳವಾರ ಬೆಳಗ್ಗೆ 10ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಪ್ರಸ್ತುತ ವರ್ಷದ ಈ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಹಾಗೂ ನಾಡಿನ ಖ್ಯಾತ ಜಾನಪದ ವಿದ್ವಾಂಸರಾದ ಡಾ.ಬಿ.ಎ. ವಿವೇಕ ರೈ ಅವರಿಗೆ ಪ್ರದಾನ ಮಾಡಲಾಗುವುದು.
ಮುಖ್ಯ ಅತಿಥಿಗಳಾಗಿ ಮಾಹೆಯ ಸಹಕುಲಪತಿ ಡಾ.ಎಂ. ವೆಂಕಟರಾಯ ಪ್ರಭು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ವಹಿಸಲಿದ್ದಾರೆ. ಸಾಹಿತಿ ಡಾ. ತಾಳ್ತಜೆ ವಸಂತಕುಮಾರ್ ಅಭಿನಂದನಾ ಭಾಷಣ ಮಾಡಲಿರುವರು. ಮೈಸೂರಿನ ಡಿ. ಬನುಮಯ್ಯ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊ.ಎಸ್. ಶಿವಾಜಿ ಜೋಯಿಸ್ ಅವರು ‘ಗೋವಿಂದ ಪೈ ಗ್ರಥನ ಕೌಶಲ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿರುವರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶರಣ್ಯ ಕೆ.ಎನ್ ಮತ್ತು ಸುಮೇಧ ಕೆ.ಎನ್ ಸಹೋದರಿಯರಿಂದ ಎಂ.ಗೋವಿಂದ ಪೈಗಳ ಕಾವ್ಯಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





