ಮತ್ಸ್ಯೋದ್ಯಮಿ, ಮೊಗವೀರ ಮುಖಂಡ ಆನಂದ ಪುತ್ರನ್ ನಿಧನ

ಉಡುಪಿ : ಹಿರಿಯ ಮತ್ಸ್ಯೋದ್ಯಮಿ, ಮೀನುಗಾರ ಮುಖಂಡ, ಉಡುಪಿ ಅಜ್ಜರಕಾಡಿನ ಆನಂದ ಎನ್.ಪುತ್ರನ್ (75) ಸೆ.2ರಂದು ಹೃದಯಾಘಾತದಿಂದ ಸ್ವಗ್ರಹದಲ್ಲಿ ನಿಧನರಾದರು.
ಆರಂಭದಲ್ಲಿ ಮುಂಬೈಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿ ಯಾಗಿದ್ದ ಇವರು ಬಳಿಕ ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನಿನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು. ಮಹಾಲಕ್ಷ್ಮೀ ಬ್ಯಾಂಕಿನ ಸ್ಥಾಪಕ ನಿರ್ದೇಶಕರಾಗಿ, 5 ವರ್ಷ ಉಪಾಧ್ಯಕ್ಷ ಹಾಗೂ 11 ವರ್ಷ ಅಧ್ಯಕ್ಷ ರಾಗಿದ್ದ ಇವರು ಪ್ರಸ್ತುತ ಬ್ಯಾಂಕಿನ ಸಲಹೆಗಾರರಾಗಿದ್ದರು.
ಕುಳಾಯಿ ಮೀನುಗಾರಿಕಾ ಬಂದರು ನಿರ್ಮಾಣದ ಸಂಚಾಲಕರಾಗಿ, ಕೂಳೂರು ಕುಳಾಯಿ ಮಹಾಜನ ಸಂಘದ ಅಧ್ಯಕ್ಷರಾಗಿ, ಮಲ್ಪೆ ಮೀನುಗಾರರ ಸಂಘ, ಮಲ್ಪೆ ಆಳಸಮುದ್ರ ಬೋಟ್ ಮಾಲಕರ ಸಂಘದ ಸಕ್ರೀಯ ಸದಸ್ಯ ರಾಗಿದ್ದ ಇವರು ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ, ಪುತ್ರನ್ ಮೂಲಸ್ಥಾನದ ಪದಾಧಿಕಾರಿ ಯಾಗಿದ್ದರು.
ಮೃತರು ಪುತ್ರರಾದ ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಎ.ಸುವರ್ಣ ಸಹಿತ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಉದ್ಯಮಿ ಜಿ.ಶಂಕರ್, ಶಾಸಕರಾದ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ರಾಜಕೀಯ ಮುಂದಾಳು ಆಯನೂರು ಮಂಜುನಾಥ್, ಸುರೇಶ್ ಶೆಟ್ಟಿ ಗುರ್ಮೆ, ಸುರೇಶ್ ನಾಯಕ್ ಕುಯಿಲಾಡಿ, ಅಶೋಕ್ ಕುಮಾರ್ ಕೊಡವೂರು, ಉದಯಕುಮಾರ್ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.







