ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ; ಮಾಜಿ ಸಿಎಂ ಯಡಿಯೂರಪ್ಪ ಪರ ಜಯಘೋಷ

ಮಂಗಳೂರು, ಸೆ.2: ಕೂಳೂರು ಸಮೀಪದ ಗೋಲ್ಡ್ ಪಿಂಚ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ವಿಶೇಷ ಆಕರ್ಷಣೆಯಾಗಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರು ಹೇಳುತ್ತಿದ್ದಂತೆಯೇ ಸೇರಿದ್ದ ಜನರು ಭಾರೀ ಉದ್ಗಾರದೊಂದಿಗೆ ಜಯಘೋಷ ಕೂಗಿದರು. ಹಾಲಿ ಮುಖ್ಯಮಂತ್ರಿ ಎದುರಲ್ಲೇ ಮಾಜಿ ಮುಖ್ಯಮಂತ್ರಿ ಅವರು ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಜನರಿಂದ ಭಾರೀ ಜಯಘೋಷವನ್ನು ಪಡೆದರು.
ಜೈ ಜೈ ಮೋದಿ ಹರ್ ಘರ್ ಮೋದಿ
ದ.ಕ. ಹಾಗೂ ಹೊರ ಜಿಲ್ಲೆಗಳಿಂದ ಬಸ್ಸುಗಳಲ್ಲಿ ಆಗಮಿಸಿದ ಜನರು ನಿಗದಿತ ಸ್ಥಳಗಳಲ್ಲಿ ಬಸ್ಸುಗಳಿಂದ ಇಳಿದು ಕಾರ್ಯಕ್ರಮದ ವೇದಿಕೆಯತ್ತ ನಡೆದುಕೊಂಡು ಸಾಗಿದರು. ಕೆಲವರ ಕೈಯ್ಯಲ್ಲಿ ಬಿಜೆಪಿ ಬಾವುಟ, ಮತ್ತೆ ಕೆಲವರು ಜೈ ಜೈ ಮೋದಿ ಹರ್ ಘರ್ ಮೋದಿ ಎಂದು ಘೋಷಣೆ ಕೂಗುತ್ತಾ ಸಭಾಂಗಣ ಪ್ರವೇಶಿಸಿದ್ದರು. ಕಾರ್ಯಕ್ರಮದ್ದುದ್ದಕ್ಕೂ ಮೋದಿ ಮೋದಿ ಎಂದು ಘೋಷಣೆ ಕೂಗಿದರು.
ಕುಳಿತುಕೊಳ್ಳಲು ಆಸನ, ಕುಡಿಯುವ ನೀರಿಗಾಗಿ ಪರದಾಟ...
ಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಸಿದ್ಧಪಡಿಸಲಾಗಿದ್ದ ವೇದಿಕೆಯ ಎದುರು ಹಾಕಲಾಗಿದ್ದ ಪೆಂಡಾಲ್‌ನ ಅರ್ಧ ಭಾಗದಷ್ಟು ಆಸನದ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಕುಳಿತುಕೊಳ್ಳಲು ಆಸನವಿಲ್ಲದೆ, ಕುಡಿಯುವ ನೀರಿಗಾಗಿ ಪರದಾಟ ನಡೆಸಬೇಕಾಯಿತು.
ಮಳೆಯು ಬರುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಜರ್ಮನ್ ತಂತ್ರಜ್ಞಾನದಿಂದ ಕೂಡಿದ ಬೃಹತ್ ಪೆಂಡಾಲ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಪೆಂಡಾಲ್‌ನ ಅರ್ಧ ಭಾಗದಷ್ಟು ಆಸನಗಳನ್ನು ಹಾಕಲಾಗಿದ್ದರೆ, ಉಳಿದರ್ಧ ಭಾಗದಲ್ಲಿ ಸಾರ್ವಜನಿಕರು ಹಿಂದಿನಿಂದ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಬೇಕಾಯಿತು. ಹಿಂದಿನಿಂದ ವೇದಿಕೆಯು ನಿಂತವರಿಗೆ ಕಾಣುವಂತಿರಲಿಲ್ಲ. ಇದಕ್ಕಾಗಿ ವೇದಿಕೆ ಎದುರು ಪೆಂಡಾಲ್‌ನುದ್ದಕ್ಕೂ ಇಕ್ಕೆಲಗಳಲ್ಲಿ ಅಲ್ಲಲ್ಲಿ ಎಲ್‌ಇಡಿ ಟಿವಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕಾರ್ಯಕ್ರಮ ಆರಂಭವಾಗುವುದು ಸಾಕಷ್ಟು ತಡವಾಗಿದ್ದರಿಂದ ಮಕ್ಕಳು, ವಯೋವೃದ್ಧರು ಹಾಗೂ ಮಹಿಳೆಯರು ಕುಳಿತುಕೊಳ್ಳಲು ಆಸನವಿಲ್ಲದೆ ಪರದಾಡಿದರು. ಪೆಂಡಾಲ್‌ನ ಇಕ್ಕೆಲಗಳಲ್ಲಿ ಉಪಹಾರದ ವ್ಯವಸ್ಥೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಪಲಾವ್ ಹಾಗೂ ಸಲಾಡ್‌ನ ಉಪಹಾರದ ವ್ಯವಸ್ಥೆ ಮಧ್ಯಾಹ್ನದವರೆಗೂ ಮುಂದುವರಿದಿತ್ತು. ಈ ನಡುವೆ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಕೂಡಾ ಪೂರೈಸಲಾಗುತ್ತಿತ್ತು. ಬೆಳಗ್ಗೆ 10.30ರಿಂದಲೇ ಜನ ಕಾರ್ಯಕ್ರಮ ಜಾಗದಲ್ಲಿ ಸೇರಲಾರಂಭಿಸಿದ್ದರು. ಮಧ್ಯಾಹ್ನ 12 ಗಂಟೆಗಾಗಲೇ ಪೆಂಡಾಲ್‌ನ ಅರ್ಧದಷ್ಟು ಭಾಗಕ್ಕೆ ಹಾಕಲಾಗಿದ್ದ ಆಸನಗಳು ಭರ್ತಿಯಾಗಿತ್ತು. ಅದರಲ್ಲೂ ವೇದಿಕೆಯ ಮುಂಭಾಗದ ಸ್ವಲ್ಪ ಭಾಗ ವಿವಿಐಪಿ, ವಿಐಪಿ ಆಸನಗಳಾಗಿತ್ತು. ಪೆಂಡಾಲ್‌ನ ಉಳಿದರ್ಧ ಖಾಲಿ ಜಾಗದಲ್ಲಿ ಸಾರ್ವಜನಿಕರು ನಿಂತುಕೊಂಡೇ ಸುಮಾರು ನಾಲ್ಕು ತಾಸು ಕಳೆಯಬೇಕಾಯಿತು.
ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಹಿಂದೆ ಪ್ರಧಾನಿ ಮೋದಿ ಮಂಗಳೂರಿಗೆ ಬಂದಾಗ ನೆಹರೂ ಮೈದಾನದಲ್ಲಿ ಸ್ಥಳದಲ್ಲಿಯೇ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಅದನ್ನು ಮಾಡದೆ ನೀರಿಲ್ಲದೆ ಗಂಟಲು ಒಣಗಿ ಹೋಗಿದೆ ಎಂದು ಕೆಲವರು ಮಾತನಾಡಿಕೊಂಡರು.
ಮನೆಯಲ್ಲಿ ಟಿವಿಯಲ್ಲೇ ಕಾರ್ಯಕ್ರಮ ನೋಡಬಹುದಾಗಿತ್ತು!
ಪೆಂಡಾಲ್‌ನೊಳಗೆ ನಿಂತು ಕಾರ್ಯಕ್ರಮ ವೀಕ್ಷಿಸುತ್ತಿದ್ದ ಹಲವರು ವೇದಿಕೆಯು ಕಾಣದ್ದರಿಂದ ಇದಕ್ಕಿಂತ ನಾವು ಟಿವಿಯಲ್ಲಿ ಮನೆಯಲ್ಲೇ ಕಾರ್ಯಕ್ರಮ ನೋಡಬಹುದಾಗಿತ್ತು ಎಂದು ಮಾತನಾಡಿದರೆ, ಸುಮ್ಮನೆ ಅಷ್ಟು ದೂರದಿಂದ ಇಲ್ಲಿ ಬಂದಿದ್ದು, ನಾಳೆ ಪೇಪರ್‌ನಲ್ಲಿ ಪ್ರಧಾನಿ ಫೋಟೋ ನೋಡಬಹುದಿತ್ತು ಎಂದು ವಯೋವೃದ್ಧರಿಂದ ಮಾತುಗಳು ಕೇಳಿ ಬಂದವು.
ಕೆಸರುಮಯವಾದ ನೆಲಹಾಸು...
ಕಾರ್ಯಕ್ರಮ ನಡೆಯುವ ಮೈದಾನಕ್ಕೆ ಪ್ರವೇಶಕ್ಕೆ ವಿಐಪಿ, ವಿವಿಐಪಿ ದ್ವಾರವಲ್ಲದೆ, ಸಾರ್ವಜನಿಕರಿಗಾಗಿ ಮೂರು ಭಾಗಗಳಲ್ಲಿ ಪ್ರವೇಶ ವ್ಯವಸ್ಥೆ ಕಲ್ಪಿಸಲಾಗಿತ್ತು. ನಿನ್ನೆ ರಾತ್ರಿ ಮಳೆ ಸುರಿದಿದ್ದ ಕಾರಣ ಮೈದಾನಕ್ಕೆ ಹಾಕಿದ್ದ ಮಣ್ಣು ಕೆಸರುಮಯವಾಗಿ ಮಾರ್ಪಟ್ಟಿತ್ತು. ಪ್ರವೇಶ ದ್ವಾರದ ಬಳಿ ಕೆಸರು ತಡೆಯಲು ಜಲ್ಲಿಕಲ್ಲು ಹಾಕಲಾಗಿದ್ದರೂ, ಕೆಸರು ತುಂಬಿದ ರಸ್ತೆಯಲ್ಲೇ ಸಾರ್ವಜನಿಕರು ಪ್ರವೇಶಿಸಬೇಕಾಯಿತು. ವೇದಿಕೆಯ ಎದುರು ಅರ್ಧಭಾಗ ಉದ್ದಕ್ಕೂ ಫ್ಲಾಟ್‌ಫಾರಂಗಳನ್ನು ಹಾಕಿ ನೆಲಹಾಸು ಹಾಕಿ ಆಸನಗಳ ವ್ಯವಸ್ತೆ ಮಾಡಲಾಗಿತ್ತು. ಇಕ್ಕೆಲಗಳಲ್ಲಿ ನೆಲಹಾಸು ಹಾಕಿ ಅರ್ಧಭಾಗ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೆಲಹಾಸು ಕೂಡಾ ಕೆಸರುಮಯವಾಗಿತ್ತು. ಕಾರ್ಯಕ್ರಮ ಮುಗಿಸಿ ಹೋಗುವಾಗ, ಈ ಕೆಸರು ತುಂಬಿದ ನೆಲಹಾಸು ಇನ್ನು ಇದನ್ನು ಬಾಡಿಗೆ ನೀಡಿದವರಿಗೂ ಪ್ರಯೋಜನಕ್ಕೆ ಬಾರದು ಎಂಬ ಮಾತುಗಳು ಜನರಿಂದ ಕೇಳಿಬರುತ್ತಿತ್ತು.
2.10ಕ್ಕೆ ಗೋಲ್ಡ್ ಪಿಂಚ್ ಮೈದಾನಕ್ಕೆ ಪ್ರಧಾನಿ ಆಗಮನ; 27 ನಿಮಿಷ ಮಾತನಾಡಿದ ಮೋದಿ
ಮಧ್ಯಾಹ್ನ 1.20ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ 1.40ರ ವೇಳೆಗೆ ಹೆಲಿಕಾಪ್ಟರ್ ಎನ್‌ಎಂಪಿಟಿಗೆ ಆಗಮಿಸಿ ಅಲ್ಲಿಂದ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ್ದರು. 2.10ಕ್ಕೆ ಗೋಲ್ಡ್ ಪಿಂಚ್ ಮೈದಾನಕ್ಕೆ ಪ್ರವೇಶಿಸಿ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ಪಡೆದರು. ಬಳಿಕ 2.23ಕ್ಕೆ ವೇದಿಕೆಗೆ ಆಗಮಿಸಿದರು. ಪ್ರಧಾನಿಗೆ ಪೇಟ ತೊಡಿಸಿ ಕೃಷ್ಣನ ಮೂರ್ತಿ ನೀಡಿ, ನೀಲ ಬಣ್ಣದ ಶಾಲು ಹಾಕಿ ಮಲ್ಲಿಗೆ ಹಾರದೊಂದಿಗೆ ಸ್ವಾಗತಿಸಲಾಯಿತು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಆರಂಭದಲ್ಲಿ ಕೇಂದ್ರದ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಸ್ವಾಗತಿಸಿದರು.
ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ ಬಳಿಕ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಪ್ರಧಾನಿ ನರೇಂದ್ರ ಮೋದಿ 27 ನಿಮಿಷಗಳ ಕಾಲ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. 3.40ರ ವೇಳೆಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು. ಬಳಿಕ 10 ನಿಮಿಷಗಳ ಕಾಲ ಪ್ರಧಾನಿ ಮೋದಿ ಅವರು ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನತೆಯತ್ತ ಕೈ ಬೀಸಿ ಸಾಗಿದರು. ಈ ಸಂದರ್ಭ ಅವರ ಕಾರಿನ ಸುತ್ತ ಭಾರಿ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಸುತ್ತುವರಿದ್ದರು. ಈ ಸಂದರ್ಭ ರಸ್ತೆ ಪಕ್ಕ ಇದ್ದ ಕಾರ್ಯಕರ್ತನೋರ್ವ ಕಾರಿನ ಹಿಂದಿನಿಂದ ಮೋದಿ ಅವರತ್ತ ಓಡಲಾರಂಭಿಸಿದ್ದ, ಈ ವೇಳೆ ಭದ್ರತಾ ಸಿಬ್ಬಂದಿ ಗಮನಿಸಿ ಆತನನ್ನು ಹಿಂದಕ್ಕೆ ಕಳುಹಿಸಿದರು. ಬಳಿಕ ಎನ್ ಎಮ್ ಪಿ ಎ ಹೆಲಿಪ್ಯಾಡ್ ಗೆ ತೆರಳಿದರು. ಅಲ್ಲಿ ಸುಮಾರು ಒಂದು ಗಂಟೆ ಕಾಲ ಬಿಜೆಪಿ ಕೋರ್ ಕಮಿಟಿ ಸದಸ್ಯರ ಜೊತೆ ಮಾತುಕತೆ ನಡೆಸಿದರು. ಬಳಿಕ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿ, 5.40ಕ್ಕೆ ವಿಮಾನ ಮೂಲಕ ತೆರಳಿದರು.
ಹೆಲಿಕಾಪ್ಟರ್ ಕಾಣಿಸಿಕೊಂಡಾಗ ಮೋದಿ ಜಯಘೋಷ
ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದರೂ ಬೆಳಗ್ಗಿನಿಂದಲೇ ಕಾರ್ಯಕ್ರಮ ಸ್ಥಳದಲ್ಲಿ ಸಾರ್ವಜನಿಕರು ಸೇರಿದ್ದರು. 1.55ರ ವೇಳೆಗೆ ಕಾರ್ಯಕ್ರಮದ ಪೆಂಡಾಲ್ ಮೇಲಿನಿಂದ ಹೆಲಿಕಾಪ್ಟರ್‌ಗಳನ್ನು ಕಂಡಾಗ ಜನ ‘‘ಮೋದಿ ಮೋದಿ’’ ಎಂದು ಘೋಷಣೆ ಕೂಗಲಾರಂಭಿಸಿದರು. 3.03ಕ್ಕೆ ಪ್ರಧಾನಿ ಮೋದಿಯವರು ವೇದಿಕೆಯಲ್ಲಿ ಮಾತನಾಡಲು ಆರಂಭಿಸಿದ್ದರು. ಪ್ರಧಾನಿ ಮಾತನಾಡಲು ಆರಂಭಿಸಿ ಕೆಲ ನಿಮಿಷಗಳಾಗುತ್ತಲೇ ಆದಾಗಲೇ ನಿಂತು ಸುಸ್ತಾಗಿದ್ದ ಕೆಲ ಜನರು ಪ್ರವೇಶ ದ್ವಾರಗಳಿಂದ ನಿರ್ಗಮಿಸಲು ಆರಂಭಿಸಿದರು.
ರಸ್ತೆಯುದ್ದಕ್ಕೂ ಜನಸ್ತೋಮ
3.34ರ ಹೊತ್ತಿಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಸಾಕಷ್ಟು ಜನ ಗೋಲ್ಡ್ ಪಿಂಚ್ ಮೈದಾನದಿಂದ ಹೊರಕ್ಕೆ ಬಂದು ರಸ್ತೆಯಲ್ಲಿ ನಡೆದು ಸಾಗಿದರು. ವಾಹನಗಳನ್ನು ಕೊಟ್ಟಾರ ಚೌಕಿ ಬಳಿಯಿಂದಲೇ ನಿಲ್ಲಿಸಿ ಹಿಂದಕ್ಕೆ ಕಳುಹಿಸಿದ್ದರಿಂದ, ನಗರದ ವಿವಿಧ ಕಡೆಗಳಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಂದ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ಜನ ಇತ್ತ ಕಾರ್ಯಕ್ರಮ ಸ್ಥಳದಿಂದ ಪಣಂಬೂರು ಕಡೆಗೆ, ಮತ್ತೊಂದೆಡೆ ಉರ್ವಾ ಮಾರುಕಟ್ಟೆವರೆಗೂ ನಡೆಯುತ್ತಾ ಸಾಗಿದರು. ಮತ್ತೆ ಕೆಲವರು ಎಜೆ ರಸ್ತೆಯಾಗಿ ಸಾಗಿದರು.
ಕಪ್ಪು ಶರ್ಟ್, ಟಿಶರ್ಟ್ ಧರಿಸಿವರಿಗೆ ಪ್ರವೇಶ ನಿರಾಕರಣೆ
ಸಭಾಂಗಣದೊಳಕ್ಕೆ ಕಪ್ಪು ಟಿಶರ್ಟ್, ಶರ್ಟ್ ಧರಿಸಿ ಹೋದವರನ್ನು ಪ್ರವೇಶ ದ್ವಾರದಲ್ಲಿಯೇ ಭದ್ರತಾ ಸಿಬ್ಬಂದಿ ಹೊರ ಕಳುಹಿಸಿದರು. ಕೆಲವರು ಭದ್ರತಾ ಸಿಬ್ಬಂದಿ ಬಳಿ ನಮಗೆ ತಿಳಿಯದೆ ಹಾಕಿದ್ದೇವೆ. ಅವಕಾಶ ಕೊಡಿ ಎಂದು ಭಿನ್ನವಿಸಿಕೊಂಡರೂ, ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ನಾವೇನೂ ಮಾಡುವಂತಿಲ್ಲ ಎಂದು ಹಿಂದಕ್ಕೆ ಕಳುಹಿಸಿದರು.
ಹೊರಗಡೆ ರಸ್ತೆಯಲ್ಲಿ ಇಬ್ಬರು ವ್ಯಾಪಾರಿಗಳು ಪ್ರಧಾನಿ ಮೋದಿಯ ಚಿತ್ರವನ್ನೊಳದೊಂಡ ಟಿ ಶರ್ಟ್ ಮಾರಾಟ ಮಾಡುತ್ತಿದ್ದರು. ಕಪ್ಪು ಟಿ ಶರ್ಟ್ ಧರಿಸಿ ಪ್ರವೇಶ ನಿರಾಕರಣೆಗೊಂಡವರು ಹೊರಗಡೆಯಿಂದ ಮೋದಿ ಟಿ ಶರ್ಟ್ ಖರೀದಿಸಿ ಮತ್ತೆ ಒಳಹೋದ ಪ್ರಸಂಗವೂ ನಡೆಯಿತು.
















