ವಿಜಯನಗರದಲ್ಲಿ ಮತ್ತೊಂದು ರಿಪಬ್ಲಿಕ್ ಆರಂಭವಾಗಿದೆ: ಸಚಿವ ಆನಂದ್ ಸಿಂಗ್ ವಿರುದ್ಧ ವಿ.ಎಸ್.ಉಗ್ರಪ್ಪ ಕಿಡಿ

ಬೆಂಗಳೂರು, ಸೆ.2: ಬಳ್ಳಾರಿ ರಿಪಬ್ಲಿಕ್ ಎರಡು ಜಿಲ್ಲೆ ಆಗಿ ಛಿದ್ರವಾದ ನಂತರ ವಿಜಯನಗರದಲ್ಲಿ ಮತ್ತೊಂದು ರಿಪಬ್ಲಿಕ್ ಆರಂಭವಾಗಿದೆ. ಇಲ್ಲಿ ನಭೂತೋ ನಭವಿಷ್ಯತಿ ಎಂಬ ರೀತಿಯಲ್ಲಿ ಸಚಿವ ಆನಂದ್ ಸಿಂಗ್ ಜನರ ಮೇಲೆ ಅಟ್ಟಹಾಸ ತೋರುತ್ತಾ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಬಳ್ಳಾರಿಯ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕಿಡಿಗಾರಿದ್ದಾರೆ.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ.30ರಂದು ಆನಂದ್ ಸಿಂಗ್ 25 ಜನರ ಜತೆ ಪರಿಶಿಷ್ಟ ಜಾತಿ ಮೂಲದ ಪೋಲಪ್ಪ ಎಂಬವರ ಮನೆ ಬಳಿ ಹೋಗಿ ಧಮಕಿ ಹಾಕಿದ್ದಾರೆ. ಅವರ ಕುಟುಂಬದ 6 ಮಂದಿ ರಕ್ಷಣೆ ಸಿಗುತ್ತಿಲ್ಲ ಎಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ. ಪೊಲೀಸರ ಮಧ್ಯಪ್ರವೇಶದಿಂದ ಇದನ್ನು ತಡೆಯಲಾಗಿದೆ ಎಂದರು.
ಮಂತ್ರಿಗಳು ಅವರಿಗೆ ಧಮಕಿ ಹಾಕಿರುವ ವಿಡಿಯೋ ರೆಕಾರ್ಡ್ ಆಗಿದೆ. ಇದರಲ್ಲಿ ‘ನೀನು ನನ್ನ ವಿಚಾರಕ್ಕೆ ಬಂದರೆ ನಿಮ್ಮನ್ನು ಪೆಟ್ರೋಲ್ ಹಾಕಿ ಸುಡುತ್ತೇನೆ ಎಂದು ಧಮಕಿ ಹಾಕಿದ್ದಾರೆ’ ಎಂದು ಉಗ್ರಪ್ಪ ತಿಳಿಸಿದರು.
ಆನಂದ್ ಸಿಂಗ್ ಅವರ ಹೊಸ ಬಂಗಲೆಗಾಗಿ ಕಾಲುವೆ ಜಾಗ ಒತ್ತುವರಿ ಆಗಿದೆ ಎಂದು ಆರು ತಿಂಗಳ ಹಿಂದೆ ದೂರು ನೀಡಿದ್ದರಿಂದ, ಆನಂದ್ ಸಿಂಗ್ ಹಾಗೂ ಎಂ.ಕೆ.ಹನುಮಂತಪ್ಪ ಎಂಬವರು ಪೋಲಪ್ಪ ಮನೆಗೆ ಹೋಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಅವರು ಮಾಡಿರುವ ಆರೋಪ ಸುಳ್ಳು ಎಂದು ಹೇಳುವಂತೆ ಹಾಗೂ ಇನ್ನು ಮುಂದೆ ಅವರ ವಿಚಾರಕ್ಕೆ ಹೋಗದಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ ಎಂದು ಉಗ್ರಪ್ಪ ಹೇಳಿದರು.
‘ಆ.30ರಂದು ಮಧ್ಯಾಹ್ನ 1.15ಕ್ಕೆ ಆನಂದ್ ಸಿಂಗ್ 25 ಜನರೊಂದಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಮ್ಮ ತಂಟೆಗೆ ಬರಬೇಡ ಎಂದು ಎಷ್ಟು ಬಾರಿ ಹೇಳಬೇಕು. ನಿನ್ನನ್ನು ಪೆಟ್ರೋಲ್ ಹಾಕಿ ಸುಟ್ಟು, ಹೆಂಡತಿ ಮಕ್ಕಳನ್ನು ಬೀದಿಗೆ ತರುತ್ತೇನೆ ಎಂದು ಎಳೆದಾಡಿದ್ದಾರೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ ಎಂದು ಉಗ್ರಪ್ಪ ಹೇಳಿದರು.
ಆದರೆ, ಪೊಲೀಸರು ದಾಖಲಿಸಿರುವ ಎಫ್‍ಐಆರ್‍ನಲ್ಲಿ ಈ ದೂರಿನ ಅನೇಕ ವಿಚಾರಗಳನ್ನು ಸೇರಿಸಿಲ್ಲ. ಈ ದೂರಿನ ಪ್ರಕಾರ ಸೆಕ್ಷನ್ ಆತ್ಮಹತ್ಯೆಗೆ ಪ್ರಚೋದನೆ, ಕೊಲೆ ಯತ್ನ ಅಡಿಯಲ್ಲಿ ಪ್ರಕರಣ ದಾಖಲಾಗಬೇಕಿತ್ತು. ಆದರೆ ಪೊಲೀಸರು ಕೇವಲ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
2007-08ರಲ್ಲಿ ಆನಂದ್ ಸಿಂಗ್ ಅವರು ಅವರ ತಂದೆ, ತಾಯಿ, ಶ್ರೀಮತಿ, ಬಾಮೈದುನ ಹೆಸರಲ್ಲಿ 25 ಎಕರೆ ಜಮೀನನ್ನು ಹೊಸಪೇಟೆ ಗ್ರಾಮದ ಸರ್ವೆ ನಂಬರ್ 65, 66, 67, 68, 69, 71, 72, 73, 74, 75, 78 ಜತೆಗೆ ಮದಲಾಪುರ ಗ್ರಾಮದ ಸರ್ವೆ ನಂಬರ್ 83 ರಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಅಯ್ಯಪ್ಪ ಸ್ವಾಮಿ, ಸುರಕ್ಷಾ ಎಂಟರ್‍ಪ್ರೈಸಸ್ ಮೂಲಕ ಈ ಜಮೀನು ಖರೀದಿಸಿ, ಹೊಸಪೇಟೆಯ ಹೃದಯ ಭಾಗದಲ್ಲಿ ಡಾಲರ್ಸ್ ಕಾಲನಿ ಎಂಬ ಲೇಔಟ್ ಮಾಡಿದ್ದಾರೆ ಎಂದು ಅವರು ಹೇಳಿದರು.
ಇಲ್ಲಿ ಆನಂದ್ ಸಿಂಗ್ ದೊಡ್ಡ ಮಹಲ್ ಕಟ್ಟಿಕೊಂಡಿದ್ದು, ತುಂಗಭದ್ರಾ ಡ್ಯಾಂನ ರಾಯರ ಕಾಲುವೆ 34, 35, 36 ಸಂಖ್ಯೆಯ ಟ್ಯೂಬ್ ಹಾಗೂ ಸರ್ವೀಸ್ ರಸ್ತೆಯನ್ನು ಇವರ ಮನೆ ಹಾಗೂ ಲೇಔಟ್ ಗೆ ಒತ್ತುವರಿ ಮಾಡಿಕೊಂಡಿದ್ದಾರೆ. ಹಸಿರು ನ್ಯಾಯಾಧಿಕರಣದ ಪ್ರಕಾರ ರಾಜಕಾಲುವೆಯ ಅಕ್ಕ ಪಕ್ಕ 50 ಮೀಟರ್ ದೂದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂದು ಉಗ್ರಪ್ಪ ಹೇಳಿದರು.
ಪ್ರಧಾನಿ ಈ ದೇಶದ ಪರಿಶಿಷ್ಟರ ರಕ್ಷಣೆ, ದೇಶದ ಸಂಪತ್ತಿನ ರಕ್ಷಣೆ ಮಾಡುವ ಕಾವಲುಗಾರನಾಗಬೇಕು. ಆದರೆ ಬಿಜೆಪಿ ಮಂತ್ರಿಗಳು ಈ ರೀತಿ ದೌರ್ಜನ್ಯ ಎಸಗಿರುವಾಗ, ಸರಕಾರಿ ಜಮೀನು, ರಾಜಕಾಲುವೆ ದುರ್ಬಳಕೆ ಮಾಡಿಕೊಂಡಿರುವಾಗ ಯಾಕೆ ಬಿಜೆಪಿಯವರು ಕ್ರಮ ಜರುಗಿಸಲು ಒತ್ತಾಯಿಸುತ್ತಿಲ್ಲ? ಎಂದು ಉಗ್ರಪ್ಪ ಪ್ರಶ್ನಿಸಿದರು.
ಆನಂದ್ ಸಿಂಗ್ ದಸ್ತಗಿರಿ ಆಗಬೇಕು, ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಬೇಕು. ಮುಖ್ಯಮಂತ್ರಿಗೆ ಕಾನೂನಿನ ಮೇಲೆ ಗೌರವ ಇದ್ದರೆ, ಕೂಡಲೆ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು. ಅವರು ಈ ಕೆಲಸ ಮಾಡದಿದ್ದರೆ ರಾಜ್ಯಪಾಲರಾದರೂ ಆನಂದ್ ಸಿಂಗ್‍ರನ್ನು ವಜಾಗೊಳಿಸಬೇಕು. ಜತೆಗೆ ಈ ಪ್ರಕರಣವನ್ನು ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ಮಾಡಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ ಘೋರ್ಪಡೆ ಉಪಸ್ಥಿತರಿದ್ದರು.







