2021ರಲ್ಲಿ ಆರೋಗ್ಯ ವ್ಯವಸ್ಥೆಯ ಮೇಲೆ ಸೈಬರ್ ದಾಳಿಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿ:ವರದಿ

photo : scroll.in
ಹೊಸದಿಲ್ಲಿ,ಸೆ.2: ಸೈಬರ್ ಬೆದರಿಕೆಗಳಲ್ಲಿ ವ್ಯವಹರಿಸುವ ಕೃತಕ ಬುದ್ಧಿಮತ್ತೆ ಕಂಪನಿ ಕ್ಲೌಡ್ಸೆಕ್ ಬಿಡುಗಡೆಗೊಳಿಸಿರುವ ವರದಿಯಂತೆ 2021ರಲ್ಲಿ ವಿಶ್ವದ ಎಲ್ಲ ದೇಶಗಳ ಆರೋಗ್ಯ ವ್ಯವಸ್ಥೆಯ ಮೇಲಿನ ಸೈಬರ್ ದಾಳಿಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ಆರೋಗ್ಯ ವ್ಯವಸ್ಥೆಗಳ ಮೇಲಿನ ಒಟ್ಟು ದಾಳಿಗಳ ಪೈಕಿ ಶೇ.7.7ರಷ್ಟು ದಾಳಿಗಳಿಗೆ ಭಾರತವು ಗುರಿಯಾಗಿತ್ತು.
2021ರಲ್ಲಿ ಅಮೆರಿಕದಲ್ಲಿ ಅತ್ಯಧಿಕ,ಶೇ.28ರಷ್ಟು ಸೈಬರ್ ದಾಳಿಗಳು ಮತ್ತು ಉಲ್ಲಂಘನೆಗಳು ನಡೆದಿವೆ. ಅಲ್ಲಿ ಆರೋಗ್ಯ ಕ್ಷೇತ್ರದ ಭಾರೀ ಡಿಜಿಟಲೀಕರಣ ಹಾಗೂ ಉದ್ಯಮದಲ್ಲಿ ಭಾರೀ ಹೂಡಿಕೆಗಳು ಮತ್ತು ಬೆಳವಣಿಗೆಯ ಅವಕಾಶಗಳಿಂದಾಗಿ ಅದು ಲಾಭದಾಯಕ ಗುರಿಯಾಗಿರುವುದು ಇದಕ್ಕೆ ಕಾರಣವಾಗಿದೆ.
ಶೇ.7ರಷ್ಟು ಒಟ್ಟು ಸೈಬರ್ ದಾಳಿಗಳೊಂದಿಗೆ ಫ್ರಾನ್ಸ್ ಅಮೆರಿಕ ಮತ್ತು ಭಾರತಗಳ ನಂತರದ ಸ್ಥಾನದಲ್ಲಿದೆ.
2021ನೇ ಸಾಲಿನ ಮೊದಲ ನಾಲ್ಕು ತಿಂಗಳುಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನ ಇದೇ ಅವಧಿಯಲ್ಲಿ ವಿಶ್ವಾದ್ಯಂತ ಆರೋಗ್ಯ ರಕ್ಷಣೆ ಉದ್ಯಮದ ಮೇಲಿನ ಸೈಬರ್ ದಾಳಿಗಳು ಶೇ.95.35ರಷ್ಟು ಏರಿಕೆಯಾಗಿವೆ.
ವರದಿಯಲ್ಲಿನ ಅಂಶಗಳು ಮಹತ್ವದ್ದಾಗಿದ್ದು,ಭಾರತವು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಡಿಜಿಟಲ್ ದಾಪುಗಾಲುಗಳನ್ನು ಹಾಕುತ್ತಿರುವ ಸಮಯದಲ್ಲಿ ವರದಿಯು ಬಿಡುಗಡೆಗೊಂಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದಡಿಯ ಆಯುಷ್ಮಾನ ಭಾರತ ಡಿಜಿಟಲ್ ಮಿಷನ್ ಪೋರ್ಟಲ್ ಸುಲಭವಾದ ಕಾಗದರಹಿತ ವ್ಯವಹಾರಕ್ಕಾಗಿ ರೋಗಿಗಳ ಆರೋಗ್ಯ ದಾಖಲೆಗಳನ್ನು ಡಿಜಿಟಲೀಕರಿಸುತ್ತಿದೆ. ಇದರಡಿ ಪ್ರತಿ ವ್ಯಕ್ತಿಗೆ ಆರೋಗ್ಯ ಖಾತೆ ಸಂಖ್ಯೆಯನ್ನು ಸೃಷ್ಟಿಸಲಾಗುತ್ತದೆ ಮತ್ತು ವೈದ್ಯಕೀಯ ದಾಖಲೆಗಳನ್ನು ಆನ್ಲೈನ್ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದರೆ,ಭಾರೀ ಸಂಖ್ಯೆಯಲ್ಲಿ ವೈದ್ಯಕೀಯ ದಾಖಲೆಗಳ ಸಂಗ್ರಹದ ಸಂಭಾವ್ಯ ದುರುಪಯೋಗದ ಬಗ್ಗೆ ಸೈಬರ್ ತಜ್ಞರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
2021ರಲ್ಲಿ ಭಾರತ ಸರಕಾರವು ಕೋವಿಡ್ ಲಸಿಕೆ ನೀಡಿಕೆಯನ್ನು ದಾಖಲಿಸಲು ಕೋವಿನ್ ಪೋರ್ಟಲ್ ಅನ್ನೂ ಅನಾವರಣಗೊಳಿಸಿತ್ತು.
ಕ್ಲೌಡ್ಸೆಕ್ ಪ್ರಕಾರ ಲಸಿಕೆ ನೀಡಿಕೆ ದಾಖಲೆಗಳು ಜಾಗತಿಕವಾಗಿ ಹೆಚ್ಚಿನ ಉಲ್ಲಂಘನೆಗಳಿಗೆ ಸಾಕ್ಷಿಯಾಗಿವೆ,ಆರೋಗ್ಯ ಕಾರ್ಯಕರ್ತರು ಮತ್ತು ರೋಗಿಗಳ ವೈಯಕ್ತಿಕ ಮಾಹಿತಿ ನಂತರದ ಸ್ಥಾನದಲ್ಲಿದೆ. ಹೆಸರು,ವಿಳಾಸ,ಇ-ಮೇಲ್,ಸಂಪರ್ಕ ದೂರವಾಣಿ ಸಂಖ್ಯೆ ಮತ್ತು ಲಿಂಗ ಈ ವೈಯಕ್ತಿಕ ಮಾಹಿತಿಗಳಲ್ಲಿ ಒಳಗೊಂಡಿವೆ.
ಆಡಳಿತಾತ್ಮಕ ಲಾಗಿನ್ಗಳು ಮತ್ತು ಹಣಕಾಸು ದಾಖಲೆಗಳ ಉಲ್ಲಂಘನೆ ಮೂರನೇ ಸ್ಥಾನದಲ್ಲಿದೆ. ಆಡಳಿತಾತ್ಮಕ ಲಾಗಿನ್ಗಳ ಮೇಲಿನ ಸೈಬರ್ ದಾಳಿಯು ರೋಗಿಗಳ ಗೋಪ್ಯತೆಯನ್ನು ಭೇದಿಸಬಲ್ಲದು ಮತ್ತು ಆಸ್ಪತ್ರೆಯ ಆಂತರಿಕ ದತ್ತಾಂಶಗಳಿಗೆ ಪ್ರವೇಶವನ್ನು ಒದಗಿಸುತ್ತದೆ.
ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಹಲವಾರು ಫಿಷಿಂಗ್ ಅಭಿಯಾನಗಳನ್ನು ಪತ್ತೆ ಹಚ್ಚಲಾಗಿತ್ತು. ದಾಳಿಕೋರರು ವಿಶ್ವ ಆರೋಗ್ಯ ಸಂಸ್ಥೆಯ ಸೋಗಿನಲ್ಲಿ ತೀರ ಇತ್ತೀಚಿಗೆ ಹೊರಡಿಸಲಾದ ಮಾರ್ಗಸೂಚಿಗಳ ಹೆಸರಿನಲ್ಲಿ ಜನರಿಗೆ ದುರುದ್ದೇಶಪೂರಿತ ಲಿಂಕ್ಗಳನ್ನು ಕಳುಹಿಸಿದ್ದರು ಎಂದು ವರದಿಯು ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕವು ವಿವಿಧ ನೂತನ ತಂತ್ರಜ್ಞಾನಗಳ ಅಳವಡಿಕೆಯನ್ನು ಆರೋಗ್ಯ ರಕ್ಷಣೆ ಉದ್ಯಮಕ್ಕೆ ಅನಿವಾರ್ಯವಾಗಿಸಿತ್ತು ಮತ್ತು ಅವು ನಿರ್ವಹಣೆಗೆ ಸಂಪೂರ್ಣವಾಗಿ ಸಜ್ಜುಗೊಂಡಿರಲಿಲ್ಲ. ಪರಿವರ್ತನೆಯು ಸುಗಮವಾಗಿರಲಿಲ್ಲ ಮತ್ತು ದಾಳಿಕೋರರಿಗೆ ಬಳಸಿಕೊಳ್ಳಲು ಸೈಬರ್ ಭದ್ರತೆಯಲ್ಲಿ ಹಲವಾರು ಲೋಪಗಳನ್ನು ಬಿಟ್ಟಿತ್ತು ಎಂದೂ ವರದಿಯು ಹೇಳಿದೆ.







