ಅಮೆರಿಕದ ಶಾಲೆಯಲ್ಲಿ ಚೂರಿ ಇರಿತಕ್ಕೊಳಗಾಗಿ ವಿದ್ಯಾರ್ಥಿ ಮೃತ್ಯು; ಇಬ್ಬರಿಗೆ ಗಾಯ

ವಾಷಿಂಗ್ಟನ್, ಸೆ.೨: ಅಮೆರಿಕದ ನಾರ್ಥ್ ಕರೊಲಿನಾ ರಾಜ್ಯದ ಶಾಲೆಯೊಂದರಲ್ಲಿ ಗುರುವಾರ ನಡೆದ ಚೂರಿ ಇರಿತ ಪ್ರಕರಣದಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಮೂವರು ಅಪ್ರಾಪ್ತ ವಯಸ್ಸಿನ ಬಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶಾಲೆಯ ಶಿಕ್ಷಕರೊಬ್ಬರೂ ಗಾಯಗೊಂಡಿದ್ದಾರೆ, ಆದರೆ ಚೂರಿ ಇರಿತದಿಂದ ಅಲ್ಲ. ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಮೈಕ್ ಯಾನಿಯೆರೊ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ನಾರ್ಥ್ಸೈಡ್ ಹೈಸ್ಕೂಲ್ನಲ್ಲಿ ಬೆಳಿಗ್ಗೆ ಸುಮಾರು ೭ ಗಂಟೆಗೆ ಘಟನೆ ನಡೆದಿದೆ. ಶಾಲೆಯೊಳಗಿನ ಹಾಲ್ನಲ್ಲಿ ಘಟನೆ ನಡೆದಿದ್ದು ಇದಕ್ಕೆ ಹಲವು ವಿದ್ಯಾರ್ಥಿಗಳು ಪ್ರತ್ಯಕ್ಷದರ್ಶಿಗಳಾಗಿದ್ದಾರೆ. ೧೬ ವರ್ಷದ ಬಾಲಕನನ್ನು ಶಾಲೆಯ ಒಳಗೆ ಮಾರಕ ಶಸ್ತ್ರಾಸ್ತ್ರ ತಂದಿರುವ, ಮಾರಕ ಅಸ್ತ್ರದಿಂದ ದಾಳಿ ನಡೆಸಿರುವ ಮತ್ತು ಶಾಲಾ ಸಿಬಂದಿಯ ಮೇಲೆ ಹಲ್ಲೆ ನಡೆಸಿರುವ ಆರೋಪದಲ್ಲಿ ಬಂಧಿಸಲಾಗಿದೆ. ಆತನ ವಿಚಾರಣೆಯ ಬಳಿಕ ೧೫ ಮತ್ತು ೧೬ ವರ್ಷದ ಇತರ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ. ಬಂಧಿತರು ಅಪ್ರಾಪ್ತ ವಯಸ್ಕರಾಗಿರುವುದರಿಂದ ಅವರ ಬಗ್ಗೆ ಹೆಚ್ಚಿನ ವಿವರ ನೀಡಲಾಗದು ಎಂದು ಅಧಿಕಾರಿಗಳು ಹೇಳಿದ್ದಾರೆ.