ಉಪ್ಪಿನಂಗಡಿ: ಮನೆಗೆ ನುಗ್ಗಿ ನಗ-ನಗದು ಕಳವು

ಉಪ್ಪಿನಂಗಡಿ: ವಿದೇಶದಿಂದ ಆಗಮಿಸುತ್ತಿದ್ದ ಮಗನನ್ನು ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು 5.33 ಲಕ್ಷ ರೂ. ಮೌಲ್ಯದ ನಗ ನಗದನ್ನು ಕಳವು ಮಾಡಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿತೊಟ್ಟು ಗ್ರಾಮದ ಅರಂತಬೈಲು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಈ ಸಂಬಂಧ ರಮ್ಲಾ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅವರ ಪುತ್ರ ಅಬ್ದುಲ್ ಅಝೀಝ್ ವಿದೇಶದಿಂದ ವಾಪಸ್ ಬರುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಕರೆ ತರಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಗುರುವಾರ ಸಂಜೆ 7 ಗಂಟೆ ಹೋದವರು ತಡ ರಾತ್ರಿ 1.45 ಕ್ಕೆ ಮನೆಗೆ ಹಿಂದಿರುಗಿದ ವೇಳೆ ಮನೆಯ ಬಾಗಿಲ ಬೀಗವನ್ನು ಯಾವುದೋ ಆಯುಧದಿಂದ ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಕಪಾಟಿನಲ್ಲಿದ್ದ 64 ಗ್ರಾಮ್ ತೂಕದ ಪೆಂಡೆಂಟ್ ಇರುವ ಚಿನ್ನದ ಸರ, 40 ಗ್ರಾಮ್ ತೂಕದ ಚಿನ್ನದ ಬಳೆ, ಅರ್ಧ ಗ್ರಾಮ್ ತೂಕದ 2 ಚಿನ್ನದ ಉಂಗುರ ಹಾಗೂ ನಗದು 8000 ರೂ. ನಗದು ಸೇರಿದಂತೆ ಒಟ್ಟು 5.33 ಲಕ್ಷ ಮೌಲ್ಯದ ನಗ ನಗದು ಕಳವು ಮಾಡಿರುವುದಾಗಿ ದೂರಿದ್ದಾರೆ.
ಉಪ್ಪಿನಂಗಡಿ ಎಸೈ ರಾಜೇಶ್ ಕೆ.ವಿ. ಮತ್ತಿತರ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.