ಶಾಶ್ವತ ವಲಸೆ ವೀಸಾ ಪ್ರಮಾಣ ಹೆಚ್ಚಿಸಿದ ಆಸ್ಟ್ರೇಲಿಯಾ

ಸಿಡ್ನಿ, ಸೆ.೨: ಸಿಬ್ಬಂದಿಗಳ ಕೊರತೆಯನ್ನು ನೀಗಿಸುವ ಉಪಕ್ರಮವಾಗಿ, ಹಾಲಿ ಆರ್ಥಿಕ ವರ್ಷದಿಂದ ಶಾಶ್ವತ ವಲಸೆ ವೀಸಾ ಪ್ರಮಾಣವನ್ನು ೩೫,೦೦೦ದಿಂದ ೧,೯೫,೦೦೦ಕ್ಕೆ ಹೆಚ್ಚಿಸಲಾಗುವುದು ಎಂದು ಆಸ್ಟ್ರೇಲಿಯಾ ಘೋಷಿಸಿದೆ.
ಕೊರೋನ ಸಾಂಕ್ರಾಮಿಕ ಉಲ್ಬಣಗೊಂಡಿದ್ದ ಸುಮಾರು ೨ ವರ್ಷ ಆಸ್ಟ್ರೇಲಿಯಾ ತನ್ನ ಗಡಿಗಳನ್ನು ಮುಚ್ಚಿತ್ತು. ಈ ಕಠಿಣ ನಿರ್ಬಂಧ ಹಾಗೂ ವಿದೇಶಿ ವಿದ್ಯಾರ್ಥಿಗಳು ಮತ್ತು ರಜೆಯ ದಿನದಲ್ಲಿ ಕೆಲಸ ಮಾಡುವವರು ದೇಶದಿಂದ ನಿರ್ಗಮಿಸಿದ್ದರಿಂದ ಉದ್ಯಮಕ್ಕೆ ಸಿಬಂದಿಗಳ ಕೊರತೆ ಎದುರಾಗಿತ್ತು.
ಕೊರೋನ ಸಾಂಕ್ರಾಮಿಕವು ನಮ್ಮ ವಲಸೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ವೇದಿಕೆಯಾಗಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ನಾನು ಬಯಸಿದ್ದೇನೆ. ಅಂದಾಜಿನ ಪ್ರಕಾರ ಈ ವರ್ಷ ಹೆಚ್ಚುವರಿಯಾಗಿ ಸಾವಿರಕ್ಕೂ ಅಧಿಕ ನರ್ಸ್ ಗಳು, ಇಂಜಿನಿಯರ್ಗಳು ನಮ್ಮ ದೇಶಕ್ಕೆ ಆಗಮಿಸಲಿದ್ದಾರೆ ಎಂದು ಆಸ್ಟ್ರೇಲಿಯಾ ದ ಗೃಹ ವ್ಯವಹಾರಗಳ ಸಚಿವೆ ಕ್ಲಾರಾ ಒ'ನೀಲ್ ಹೇಳಿದ್ದಾರೆ. ವಾರ್ಷಿಕ ವಲಸೆ ವೀಸಾದ ಮೇಲಿನ ಮಿತಿಯನ್ನು ೧,೬೦,೦೦೦ಕ್ಕೆ ಹೆಚ್ಚಿಸುವಂತೆ ಉದ್ಯಮಿಗಳು ಸರಕಾರವನ್ನು ಆಗ್ರಹಿಸಿದ್ದರು.