ಬ್ರಿಟನ್: ಪ್ರಧಾನಿ ಗಾದಿಗೆ ಸನಿಹವಾದ ಲಿಝ್ ಟ್ರೂಸ್: ರಿಷಿ ಸುನಾಕ್ ಕನಸು ಭಗ್ನ?

ಲಂಡನ್, ಸೆ.2: ಬ್ರಿಟನ್ ನ ಪ್ರಧಾನಿ ಹುದ್ದೆಗೆ ಮಾಜಿ ಸಚಿವರಾದ ರಿಷಿ ಸುನಾಕ್ ಮತ್ತು ಲಿಝ್ ಟ್ರೂಸ್ ಮಧ್ಯೆ ಕಳೆದ ಕೆಲ ದಿನಗಳಿಂದ ನಡೆದ ತುರುಸಿನ ಪೈಪೋಟಿ ಶುಕ್ರವಾರ ಅಂತ್ಯಗೊಳ್ಳಲಿದ್ದು ಸೋಮವಾರ ಫಲಿತಾಂಶದ ಘೋಷಣೆಯಾಗಲಿದೆ. ಈ ಮಧ್ಯೆ, ಲಿಝ್ ಟ್ರೂಸ್ ಅಂತಿಮ ಹಂತದಲ್ಲಿ ಮೇಲುಗೈ ಪಡೆದಿದ್ದು ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ಹೇಳಿವೆ.
ಬ್ರಿಟನ್‌ನ ಮೊದಲ ಭಾರತೀಯ ಬ್ರಿಟನ್ ಪ್ರಧಾನಿ ಎಂಬ ದಾಖಲೆ ಬರೆಯುವ ಉತ್ಸಾಹದಲ್ಲಿದ್ದ ಸುನಾಕ್ ಕನಸು ಭಗ್ನವಾಗುವ ಸಾಧ್ಯತೆಯಿದೆ. ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ದೇಶದಾದ್ಯಂತದ ಸುಮಾರು ೨ ಲಕ್ಷ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಆಗಸ್ಟ್ ಆರಂಭದಲ್ಲಿ ಆರಂಭಗೊಂಡ ಅಂಚೆಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಶುಕ್ರವಾರ ಸಂಜೆ 5 ಗಂಟೆಗೆ (ಬ್ರಿಟನ್ ಕಾಲಮಾನ) ಪ್ರಕ್ರಿಯೆ ಮುಕ್ತಾಯಗೊಂಡಿದೆ. ಬಹುತೇಕ ಸದಸ್ಯರು ಟ್ರೂಸ್ರನ್ ರನ್ನು ಬೆಂಬಲಿಸಿದ್ದಾರೆ ಎನ್ನಲಾಗಿದ್ದು ಮತಎಣಿಕೆಯ ಬಳಿಕ ಅಂತಿಮ ಫಲಿತಾಂಶವನ್ನು ಬ್ರಿಟನ್‌ನ ರಾಣಿ ಸೋಮವಾರ ಪ್ರಕಟಿಸಲಿದ್ದಾರೆ.
ರಿಷಿ ಸುನಾಕ್ ಗೆ ಆರಂಭಿಕ ಹಂತದಲ್ಲಿ ಕನ್ಸರ್ವೇಟಿವ್ ಪಕ್ಷದ ಬಹುತೇಕ ಸದಸ್ಯರ ಬೆಂಬಲ ದೊರಕಿತ್ತು. ಆದರೆ ಮುಂದಿನ ದಿನಗಳಲ್ಲಿ ಪಕ್ಷದ ಪದಾಧಿಕಾರಿಗಳು ಟ್ರೂಸ್ ಅವರ ಬಲಪಂಥೀಯ ವೇದಿಕೆ ಪರ ಪ್ರಚಾರ ಮಾಡಿದರು. ತೆರಿಗೆ ಕಡಿತದ ಭರವಸೆ ನೀಡುವ ಮೂಲಕ ಸದಸ್ಯರ ಬೆಂಬಲ ಹೆಚ್ಚಿಸಿಕೊಳ್ಳಲು ಟ್ರೂಸ್ ಯಶಸ್ವಿಯಾದರು. `ಸುನಾಕ್ ಅವರಲ್ಲಿ ಉತ್ತಮ ಸಚಿವರಾಗುವ ಸಾಮರ್ಥ್ಯ, ಅರ್ಹತೆಗಳಿವೆ. ಆದರೆ ಟ್ರೂಸ್ ಅವರಲ್ಲಿ ಉತ್ತಮ ರಾಜಕಾರಣಿಯಾಗುವ ಅರ್ಹತೆ, ಸಾಮರ್ಥ್ಯವಿದೆ' ಎಂದು ಸ್ಟ್ರಾಕೈಡ್ ವಿವಿಯ ರಾಜಕೀಯ ಶಾಸ್ತ್ರ ದ ಪ್ರೊಫೆಸರ್ ಜಾನ್ ಕರ್ಟಿಸ್ ಹೇಳಿದ್ದಾರೆ. ಆದರೆ ಯಾರೇ ಗೆದ್ದರೂ, ಅವರ ಎದುರು ಸವಾಲುಗಳ ಸರಣಿಯೇ ಇರಲಿದೆ. ಏರುತ್ತಿರುವ ಹಣದುಬ್ಬರ, ಜೀವನ ವೆಚ್ಚದ ಏರಿಕೆ, ತೆರಿಗೆ ದರ ಕಡಿತ, 12 ವರ್ಷದ ಕನ್ಸರ್ವೇಟಿವ್ ಅಧಿಕಾರದ ಸರಪಳಿಯನ್ನು ಮುಂದುವರಿಸಿಕೊಂಡು ಹೋಗುವ ಕಠಿಣ ಸವಾಲುಗಳಿವೆ.







