ಪ್ರೊ. ಶೇಖ್ ಅಲಿ ಇತಿಹಾಸದ ಸತ್ಯಗಳನ್ನು ಹೇಳುತ್ತಾ ನಿರ್ಗಮಿಸಿದ ಇತಿಹಾಸಕಾರ

ಕೆಲವು ದಿನಗಳ ಹಿಂದೆ ಪ್ರೊ. ಶೇಖ್ ಅಲಿಯವರ ಮನೆಯಲ್ಲಿ ನ್ಯೂ ಮುಸ್ಲಿಮ್ ಹಾಸ್ಟೆಲಿನ ಮ್ಯಾನೆಜ್‌ಮೆಂಟ್ ಸಮಿತಿಯ ಕೆಲ ಸದಸ್ಯರು ಸೇರಿದ್ದೆವು. ಇದರಲ್ಲಿ ಪ್ರೊ. ಆಝಂ, ಪ್ರೊ.ಶಕೀಬುರ್ರಹ್‌ಮಾನ್, ನಾನು ಮತ್ತು ಜನಾಬ್ ಮೇಕ್ರಿ ಸಾಹೇಬರು ಇದ್ದರು. ಅವರ ಮನೆಯಲ್ಲಿ ಸೇರಿಕೊಳ್ಳಲು ಒಂದು ತುರ್ತು ಕಾರಣವಿತ್ತು. ಪ್ರೊ. ಶೇಖ್ ಅಲಿಯವರು ಎರಡು ದಶಕದಿಂದಲೂ ಅಧ್ಯಕ್ಷರಾಗಿ ಯಾವುದೇ ಭ್ರಷ್ಟಾಚಾರಗಳಿಗೆ ಅವಕಾಶ ಮಾಡಿಕೊಡದೆ, ನೂರಾರು ಮುಸ್ಲಿಮ್ ವಿದ್ಯಾರ್ಥಿಗಳ ಭವಿಷ್ಯತ್ತನ್ನು ನಿರೂಪಿಸಿದ ನ್ಯೂ ಮುಸ್ಲಿಮ್ ಹಾಸ್ಟೆಲ್‌ನ ಮ್ಯಾನೆಜ್‌ಮೆಂಟ್ ಸಮಿತಿಯನ್ನು ಯಾವುದೇ ಮುನ್ಸೂಚನೆಯನ್ನು ನೀಡದೆ ವಕ್ಫ್ ಬೋರ್ಡ್ ಹಠಾತ್ತಾಗಿ ಬರ್ಕಾಸ್ತುಗೊಳಿಸಿತ್ತು.
ಜೀವನದ ಕೊನೆಯ ಕಾಲದಲ್ಲಿ ವಕ್ಫ್ ಬೋರ್ಡ್‌ನ ನಡವಳಿಕೆ ಅವರಿಗೆ ಸಹಜವಾಗಿ ಗೊಂದಲಕ್ಕಿಂತಲೂ, ಆಘಾತವನ್ನು ನೀಡಿತ್ತು. ಅವರು ಆ ಆಘಾತವನ್ನು ತಡೆಯುವಷ್ಟು ಶಕ್ತಿ ಶಾಲಿಯಾಗಿರಲಿಲ್ಲ. ಹಾಸ್ಟೆಲ್ ಕುರಿತಂತೆ ಅವರಿಗೆ ದೊಡ್ಡ ಕನಸೊಂದಿತ್ತು. 180 ವಿದ್ಯಾರ್ಥಿಗಳಿಗಾಗಿ ಹೊಸ ಕಟ್ಟಡವನ್ನು ಕಟ್ಟಿಸಿ ನಿರ್ಗಮಿಸಲು ಅವರು ನಿರ್ಧರಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಚರ್ಚಿಸಲು ತಮ್ಮ ಈ ಇಳಿ ವಯಸ್ಸಿನಲ್ಲೂ ಕಷ್ಟ ಪಟ್ಟು ಮಾಜಿ ಮಂತ್ರಿಯೊಬ್ಬರ ಬಳಿ ಹೋಗಿದ್ದರು, ಕಳಕಳಿಯಿಂದ ಬೇಡಿಕೊಂಡರು. ಮೊಮ್ಮಗನ ಪ್ರಾಯದ ಮಾಜಿ ಮಂತ್ರಿ ಅವರ ಮಾತಿಗೆ ಸೊಪ್ಪು ಹಾಕಲೇಇಲ್ಲ.ಆದರೆ ಟಿ.ವಿ. ಮಾಧ್ಯಮದೆದುರು ಅವರ ಗುಣಗಾನ ಮಾಡುತ್ತಾ ಹೋದರು.ಇದು ನಮ್ಮ ಹೆಮ್ಮೆಯ ಇತಿಹಾಸಕಾರರಿಗೆ ಮಾಡಿದ ಅವಮಾನವಲ್ಲವೇ?
ಪ್ರೊ. ಶೇಖ್ ಅಲಿ ಧೀಮಂತವಾಗಿ, ಯಾವುದೇ ಮಾನಸಿಕ ತುಮುಲಗಳಿಲ್ಲದೆ, ಹಗೆತನಗಳಿಲ್ಲದೆ ಎದುರಿಸಿದ ಇಂತಹ ಅದೆಷ್ಟೋ ಘಟನೆಗಳಿವೆ. 1983/84ರಲ್ಲಿ ಅವರ ವಿರುದ್ಧ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ 45 ದಿನಗಳ ವಿದ್ಯಾರ್ಥಿಗಳ ಮುಷ್ಕರ ಇದಕ್ಕೆ ಸಾಕ್ಷಿ. ಪ್ರೊ. ಶೇಖ್ ಅಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಗಳಾಗಿ ನೇಮಕಗೊಂಡಾಗ ಬಹಳ ಜನ ಇವರ್ಯಾರು ಎಂದು ಹುಬ್ಬೇರಿಸಿದ್ದು ಇದೆ. ಬಾವುಟಗುಡ್ಡೆಯಲ್ಲಿ ತಮ್ಮ ಕಚೇರಿಯನ್ನು ಕುರ್ಚಿಗಳಿಲ್ಲದೆ ನೆಲದ ಮೇಲೆ ಕುಳಿತು ಆರಂಭಿಸಿದಾಗ ಅವರ ಬಗ್ಗೆ ಇದ್ದ ಅಪನಂಬಿಕೆ ತಿಳಿಯಾಯಿತು, ವಿಶ್ವಾಸ ಗಾಢವಾಗಿ ಬೆಳೆಯಿತು.ಅದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮುಷ್ಕರ ಹೂಡಿದ್ದರು. ಅದರಲ್ಲಿ ಪ್ರಗತಿಪರ ವಿದ್ಯಾರ್ಥಿಗಳು ಕೂಡ ಸೇರಿದ್ದರು.ಬಹುಷ: ಮುಂಗಾರು ಪತ್ರಿಕೆಯ ಪ್ರಭಾವ, ಅದರಲ್ಲೂ ವ್ಯವಸ್ಥೆಯನ್ನು ವಿರೋಧಿಸುವ ಸಹಜ ಸ್ವಭಾವ,ಇಲ್ಲಿ ಕೆಲಸ ಮಾಡಿರಬಹುದು. ಮುಷ್ಕರಕ್ಕೆ ಅವರು ತಾಳ್ಮೆ, ಸಂಯಮ ಕಳೆದುಕೊಳ್ಳಲಿಲ್ಲ. ಅವರ ಗಮನವಿದ್ದದ್ದು ಮಂಗಳೂರು ವಿಶ್ವವಿದ್ಯಾನಿಲಯವನ್ನು ಒಂದು ಶ್ರೇಷ್ಠ ಮಟ್ಟದ ವಿಶ್ವವಿದ್ಯಾನಿಲಯವನ್ನಾಗಿ ಬೆಳೆಸುವುದರ ಕಡೆ ಇತ್ತು. ಅವರು ಮಾಡಿದ ಒಂದು ಉತ್ತಮ ಕೆಲಸವೆಂದರೆ: ವಿದ್ವಾಂಸರನ್ನು ಹುಡುಕಿ, ಹುಡುಕಿ ಕಲೆ ಹಾಕಿದ್ದು ಮತ್ತು ನೇಮಿಸಿದ್ದು, ಅಲ್ಲದೇ ಅವರ ಬೆನ್ನೆಲುಬಾಗಿ ನಿಂತು ಬಿಟ್ಟರು. ಇದರ ಫಲಶ್ರುತಿಯಂತೆ ಕೆಲವರು ವಿವಿಧ ವಿಶ್ವವಿದ್ಯಾನಿಲಯದ ಕುಲಪತಿಗಳಾದರು, ವಿಜ್ಞಾನಿಗಳಾದರು, ಚಿಂತಕರಾದರು. ಸಮಾಜ ವಿಜ್ಞಾನಿಗಳಾದರು (ಬಿಳಿಮಲೆ, ರೊಡ್ರಿಗಸ್, ಸಬಿಹಾ, ಸಿ.ಎನ್. ರಾಮಚಂದ್ರನ್, ವಿವೇಕ್ ರೈ, ಗಜೇಂದ್ರಗಡ್, ಸುರೇಂದ್ರ ರಾವ್ ಇತ್ಯಾದಿ.) ಇದಕ್ಕೆ ಸಾಕ್ಷಿಯೆಂಬಂತೆ ಮಂಗಳೂರು ವಿಶ್ವವಿದ್ಯಾನಿಲಯ ತನ್ನ ಮುಖ್ಯರಸ್ತೆಗೆ ಅವರ ಹೆಸರನ್ನೇ ಇಟ್ಟು ಬಿಟ್ಟಿತ್ತು.
ಈ ರೀತಿಯ ಹುಡುಕಾಟ ಮತ್ತು ಸಮಾಜವನ್ನು ಜ್ಞಾನದ ತಳಹದಿಯ ಮೇಲೆ ಕಟ್ಟುವ ಕಲೆ ಒಬ್ಬ ಶ್ರೇಷ್ಠ ಸಮಾಜ ವಿಜ್ಞಾನಿಗೆ ಮಾತ್ರ ಇರುತ್ತದೆ. ಈ ಕಲೆ ಕೆಲವರಲ್ಲಿ ಮಾತ್ರ ಇತ್ತು- ಡಾ.ಝಾಕಿರ್ ಹುಸೈನ್, ಕುವೆಂಪುಗೆ ಈ ಕಲೆ ಇತ್ತು.ಆದರೆ ಅವರಿಬ್ಬರು ಇದ್ದ ಕಾಲಘಟ್ಟಗಳು ಬೇರೆ ಬೇರೆ. ಆದರೆ ಇವರಲ್ಲಿ ಸಮಾನ ಅಂಶವೊಂದಿತ್ತು. ಇವರೆಲ್ಲರೂ ಜ್ಞಾನದ ತಳಹದಿಯ ಮೇಲೆ ಆಧುನಿಕ ಭಾರತವನ್ನು ಕಟ್ಟಲು ನೋಡಿದವರು. ಡಾ. ಝಾಕಿರ್ ಹುಸೈನ್‌ಗೆ ರಾಷ್ಟ್ರೀಯ ಹೋರಾಟ ಆಧುನಿಕ ಭಾರತದ ತಳಹದಿಯನ್ನು ನೀಡಿದರೆ, ಪ್ರೊ. ಶೇಖ್ ಅಲಿಯವರಿಗೆ ಇತಿಹಾಸದ ನೆನಪುಗಳು, ಸ್ಮತಿಗಳು, ಜ್ಞಾನ ಸಂಪತ್ತು ಆಧುನಿಕ ಭಾರತದ ತಳಹದಿಯನ್ನು ನೀಡಿದವು.
ಗೋವಾ ಸರಕಾರ ಅವರನ್ನು ಗೋವಾ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಕುಲಪತಿಯನ್ನಾಗಿ ನೇಮಿಸಿದಾಗ ಮತ್ತೊಮ್ಮೆ ಇವರ್ಯಾರವ ಎಂಬ ಪ್ರಶ್ನೆಯನ್ನು ಕೇಳಿದವರ ಸಂಖ್ಯೆ ಕಡಿಮೆ ಏನಿರಲಿಲ್ಲ. ಅಲ್ಲಿಯೂ ಕೂಡ ಅವರ ಕಚೇರಿ ಇದ್ದುದು ಚಿಕ್ಕ ಗೂಡಿನಲ್ಲಿ. ಇಲ್ಲಿಯೂ ಕೂಡ ಅದೇ ಪ್ರಯೋಗ- ಭಾರತಾದ್ಯಂತ ಇರುವ ಶ್ರೇಷ್ಠಮಟ್ಟದ ವಿಶ್ವವಿದ್ಯಾನಿಲಯಗಳಿಂದ, ಸಂಸ್ಥೆಗಳಿಂದ ಚಿಂತಕರನ್ನು, ಬುದ್ಧಿಜೀವಿಗಳನ್ನು, ವಿಜ್ಞಾನಿಗಳನ್ನು ಕರೆತರುವಲ್ಲಿ ಯಶಸ್ವಿಯಾದರು. ಒಂದು ಸಣ್ಣ ವಿಶ್ವವಿದ್ಯಾನಿಲಯ ದೊಡ್ಡದಾಗಿ ಗುರುತಿಸಲ್ಪಡಲು ಆರಂಭವಾಯಿತು. ದುರಂತವೆಂದರೆ ಅವರು ನೇಮಿಸಿದ ಬಹಳಷ್ಟು ಬುದ್ಧಿಜೀವಿಗಳು ಹಲವು ಕಾರಣಗಳಿಗೆ ಗೋವಾ ವಿಶ್ವವಿದ್ಯಾನಿಲಯವನ್ನು ತೊರೆದು ಹೋದರು, ವಿಶ್ವವಿದ್ಯಾನಿಲಯ ಸೊರಗುತ್ತಾ ಹೋಯಿತು. ಅದೇನೇ ಇದ್ದರೂ ಅವರು ನೇಮಿಸಿದ ಕೆಲವರು ವಿಶ್ವವಿದ್ಯಾನಿಲಯದ ಕುಲಪತಿಗಳಾದರು. ಇಂದಿನ ಜೆಎನ್ ಯು ಕುಲಪತಿ ಅವರ ಕಾಲಘಟ್ಟದಲ್ಲಿ ಗೋವಾ ವಿಶ್ವವಿದ್ಯಾನಿಲಯಕ್ಕೆ ನೇಮಕಗೊಂಡವರು (ವಿಚಿತ್ರವೆಂದರೆ ನನ್ನನ್ನು ಅವರು ಗೋವಾ ವಿವಿಗೆ ಆಯ್ಕೆ ಮಾಡಲೇ ಇಲ್ಲ ಅಥವಾ ಎಲ್ಲಿಯೂ ಶಿಫಾರಸು ಮಾಡಲಿಲ್ಲ!)
ಅವರು ಇತಿಹಾಸವನ್ನು ಕಟ್ಟುವ, ನೋಡುವ ರೀತಿ ಆಲಂಕಾರಿಕೆಗಿಂತಲೂ ಹೆಚ್ಚಾಗಿ ವಾಸ್ತವತೆಯನ್ನು, ವಿಸ್ಮತಿಗೊಳಗಾದ ವಿಷಯಗಳನ್ನು ಮುನ್ನೆಲೆಗೆ ತರುವ ಯತ್ನದಲ್ಲಿತ್ತು. ಅವರ ಕಥನದಲ್ಲಿ ನಾಡು ಕಟ್ಟುವ ರೂಪಕಗಳೆಂದರೆ ಸರ್ ಸಯ್ಯದ್ ಅಹಮದ್ ಖಾನ್, ಮೌಲಾನ ಆಝಾದ್, ಡಾ.ಝಾಕಿರ್ ಹುಸೈನ್ ಮತ್ತು ಟಿಪ್ಪು ಸುಲ್ತಾನ್. ಪ್ರೊ. ಶೇಖ್ ಅಲಿಯವರು ಕಟ್ಟಿದ ಹತ್ತು ಹಲವು ವಿದ್ಯಾಸಂಸ್ಥೆಗಳು. ಮಹಿಳಾ ತರಬೇತಿ ಕೇಂದ್ರ, ಶಿಕ್ಷಕರ ವಿದ್ಯಾನಿಲಯಗಳಿಗೆ ಮೂಲ ಪ್ರೇರಣೆ ಸರ್ ಸಯ್ಯದ್ ಅಹಮದ್ ಖಾನ್, ಧರ್ಮ- ಸಮಷ್ಟಿ ರಾಷ್ಟ್ರೀಯತೆ- ಮತ್ತು ಜಾತ್ಯತೀತತೆಗೆ ಪ್ರೇರಣೆಯಾದವರು ಮೌಲಾನ ಆಝಾದ್- ಈ ಕಾರಣಗಳಿಗೆ ಅವರು ತಮ್ಮ ಶಿಕ್ಷಕರ ಸಂಸ್ಥೆಗೆ ಮೌಲಾನ ಆಝಾದ್ ಹೆಸರು ಇಟ್ಟಿದ್ದರು.
ಟಿಪ್ಪು ಕುರಿತಂತೆ ಅವರಿಗೆ ಅಗಾಧವಾದ ಪ್ರೇಮವಿತ್ತು, ಅಗಾಧವಾದ ಜ್ಞಾನವಿತ್ತು. ಟಿಪ್ಪು ಕುರಿತಂತೆ ಅವರ ನಿಲುವುಗಳು ಯಾವತ್ತೂ ಬದಲಾಗಲೇ ಇಲ್ಲ. ಅವರ ಪ್ರಕಾರ ಅವನೊಬ್ಬ ಶ್ರೇಷ್ಠ ರಾಷ್ಟ್ರೀಯವಾದಿ, ವಸಾಹತುಶಾಹಿ ವಿರೋಧಿ, ಜಾತ್ಯತೀತವಾದಿ. ಮಾನವತಾವಾದಿ, ಫ್ರೆಂಚ್ ಕ್ರಾಂತಿಯಿಂದ ಪ್ರಭಾವಿತನಾಗಿದ್ದವನು, ಅಮೆರಿಕ ಕ್ರಾಂತಿಗೂ ಪ್ರಭಾವಿಸಿದವನು. ಟಿಪ್ಪುವನ್ನು ವಿಮರ್ಶಿಸುವಾಗ ಜನಸಾಮಾನ್ಯರ ತಿಳುವಳಿಕೆಗೆ ಬಾರದ ಕೆಲವು ವಿಷಯಗಳನ್ನು ಮುನ್ನೆಲೆಗೆ ತಂದರು.ಅದರಲ್ಲಿ ಎಡನ್‌ನಲ್ಲಿ ಟಿಪ್ಪು ಸ್ಥಾಪಿಸಿದ ಪ್ರಪ್ರಥಮ ಶೇರ್ ಕಂಪೆನಿ, ಮಲಬಾರಿನಲ್ಲಿ ಹೆಂಗಸರು ಅರೆ ನಗ್ನರಾಗುವುದನ್ನು ತಡೆ ಹಿಡಿಯುವ ವಿಷಯ, ಗುರುವಾಯೂರು ದೇವಸ್ಥಾನಕ್ಕೆ ಟಿಪ್ಪು ಕೊಟ್ಟ ದತ್ತಿ, ಕೋಡ್ಲಗಿ ದೇವಸ್ಥಾನವನ್ನು ಮರಾಠರು ನಾಶ ಮಾಡಿದ ಪರಿ ಸೇರಿಕೊಂಡಿದ್ದವು. ವಿಚಿತ್ರವೆಂದರೆ ಟಿಪ್ಪು ಗಲಾಟೆ ಸಂದರ್ಭದಲ್ಲಿ ಯಾರೂ ಕೂಡ ಪ್ರೊ. ಶೇಖ್ ಅಲಿಯವರ ನಿಲುವನ್ನು ಪ್ರಶ್ನಿಸಲಿಲ್ಲ, ಅದು ಸಾಧ್ಯನೂ ಆಗುತ್ತಿರಲಿಲ್ಲ. ವಾಸ್ತವವಾಗಿ ಟಿಪ್ಪುವಿನ ಮೂಲಕ ಅವರು ಇತಿಹಾಸಕ್ಕೆ ಹೊಸ ಆಯಾಮವನ್ನು ನೀಡಿದರು, ವಸಾಹತುಶಾಹಿಗಳು ಕಟ್ಟಿದ ಇತಿಹಾಸವನ್ನು ಮತ್ತೊಮ್ಮೆ ದಾಖಲೆ ಸಮೇತ ಪ್ರಶ್ನಿಸಿದರು. ಪ್ರೊ.ಶೇಖ್ ಅಲಿಯವರು ಬರೇ ಜ್ಞಾನ ಸಂಪಾದನೆಗೆ ಸೀಮಿತಗೊಂಡಿದ್ದರು ಎಂದರೆ ಅದು ಮಿಥ್ಯೆ ಎನ್ನಬಹುದು. ಭಾರತದಲ್ಲಿ ಕ್ಷೀಣಿಸುತ್ತಿರುವ ಜಾತ್ಯತೀತತೆ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ, ಅಲ್ಪಸಂಖ್ಯಾತರ ಭದ್ರತೆ ಕುರಿತಂತೆ ಅವರಿಗೆ ತೀವ್ರತರವಾದ ಕಾಳಜಿಗಳಿದ್ದವು. ಎಷ್ಟೋ ಸಲ ಅವುಗಳು ಬೇರೆ ಬೇರೆ ರೂಪದಲ್ಲಿ ಅಭಿವ್ಯಕ್ತಿಗೊಂಡಿದ್ದವು. ಶಿಕ್ಷಣ ಸಂಸ್ಥೆಗಳ ಸ್ಥಾಪನೆಯನ್ನು, ಸರಕಾರೇತರ ಸಂಸ್ಥೆಗಳ ಸ್ಥಾಪನೆಯನ್ನು ಈ ಎಲ್ಲಾ ಕಾಳಜಿಗಳ ಹಿನ್ನೆಲೆಯಲ್ಲಿ ನೋಡಬೇಕು. ಅವರು ಔದಾರ್ಯಕ್ಕೆ ಹೆಸರುವಾಸಿ. ಅವರ ಕಚೇರಿಯಲ್ಲಿ ಗುಮಾಸ್ತನಾಗಿ ದುಡಿಯುತ್ತಿದ್ದ ವ್ಯಕ್ತಿಗೆ ಸ್ನಾತಕೋತ್ತರ ಮಾಡಲು ಪ್ರೇರೇಪಿಸಿ, ಪಿಎಚ್‌ಡಿಯ ಮಾರ್ಗದರ್ಶಕರಾದರಲ್ಲದೆ, ಅವನಿಗೆ ಉಪನ್ಯಾಸಕನ ಹುದ್ದೆಯನ್ನು ಕೂಡ ಕೊಡಿಸಿದರು. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಮುಸ್ಲಿಮ್ ಹಾಸ್ಟೆಲ್‌ನಲ್ಲಿ ಧರ್ಮಾರ್ಥವಾಗಿ ಊಟ ತಿಂಡಿ ಮತ್ತು ವಿದ್ಯಾಭ್ಯಾಸ ಮುಗಿಯುವ ತನಕ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದರು.
ಅದೇನೇ ಇದ್ದರೂ ಅವರು ಅನಂತ ಮೂರ್ತಿಯವರಂತೆ ಹೋರಾಟಗಾರರಾಗಿರಲಿಲ್ಲ, ಇರ್ಫಾನ್ ಹಬೀಬ್‌ರಂತೆ ಮಾರ್ಕ್ಸ್‌ವಾದಿಯಾಗಿರಲಿಲ್ಲ, ಹಾಬ್ಸ್ವನಂತೆ ದೊಡ್ಡ ಜಾಗತಿಕ ಇತಿಹಾಸಕಾರರಾಗಲಿಲ್ಲ, ದುರಂತವೆಂದರೆ ಕೋಮುವಾದದ ವಿರುದ್ಧ ದೊಡ್ಡ ಧ್ವನಿಯಾಗಲೇ ಇಲ್ಲ. ಸರ್ ಸಯ್ಯದ್ ಅಹಮದ್‌ಖಾನ್‌ರಂತೆ ಕನಸು ಕಂಡರು, ಅವರನ್ನು ಅನುಸರಿಸಿದರು, ಅವರಂತೆ ಬದುಕಿ ಬಾಳಿದರು.ತಾವೇ ಕಟ್ಟಿದ ಚೌಕಟ್ಟಿನಲ್ಲಿ ಇತಿಹಾಸದ ಸತ್ಯಗಳನ್ನು ಹೇಳುತ್ತಾ ಹೋದರು.ಇತಿಹಾಸದ ಸತ್ಯಗಳನ್ನು ಕಟ್ಟುವ ಕೊನೆಯ ಕೊಂಡಿ ಕಳಚಿತು.ಇತಿಹಾಸ ಬಡವಾಯಿತು.
(ಲೇಖಕರು ಮೈಸೂರು ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನರು)







