ಬೆಂಗಳೂರು: ರೇಜರ್ ಪೇ, ಪೇಟಿಎಂ, ಕ್ಯಾಶ್ಫ್ರೀ ಘಟಕಗಳ ಮೇಲೆ ಈ.ಡಿ. ದಾಳಿ

Photo- PTI
ಬೆಂಗಳೂರು, ಸೆ.3: ರಾಜಧಾನಿ ಬೆಂಗಳೂರಿನಲ್ಲಿರುವ ರೇಜರ್ ಪೇ, ಪೇಟಿಎಂ, ಕ್ಯಾಶ್ಫ್ರೀಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ದಾಳಿ ನಡೆಸಿರುವ ಜಾರಿ ನಿರ್ದೆಶನಾಲಯ(ಈಡಿ) ಶೋಧ ಕಾರ್ಯ ಮುಂದುವರಿಸಿದೆ.
ದಾಳಿ ಸಂದರ್ಭದಲ್ಲಿ ಸಂಸ್ಥೆಯು ಚೀನೀ ವ್ಯಕ್ತಿಗಳು ನಿಯಂತ್ರಿಸಲ್ಪಡುತ್ತಿದ್ದ ಈ ಘಟಕಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ, ದುಷ್ಕರ್ಮಿಗಳು ಭಾರತೀಯರ ನಕಲಿ ದಾಖಲೆಗಳನ್ನು ಬಳಸುತ್ತಾರೆ ಮತ್ತು ಅವರನ್ನು ಅಪರಾಧದ ಆದಾಯ ಗಳಿಕೆಗೆ ನಕಲಿ ನಿರ್ದೇಶಕರನ್ನಾಗಿ ಮಾಡುತ್ತಾರೆ.ಆದರೆ, ಈ ಘಟಕಗಳು ಚೀನೀ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುತ್ತವೆ ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ಈಡಿ ತಿಳಿಸಿದೆ.
ರೇಜರ್ ಪೇ ಪ್ರೈ ಲಿ, ಕ್ಯಾಶ್ಫ್ರೀ ಪೇಮೆಂಟ್ಸ್, ಪೇಟಿಎಂ ಪೇಮೆಂಟ್ ಸರ್ವಿಸಸ್ ಲಿ ಮತ್ತು ಚೀನಾದ ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುತ್ತಿರುವ ಘಟಕಗಳು ಶೋಧ ಕಾರ್ಯಾಚರಣೆಯಲ್ಲಿ ಒಳಗೊಂಡಿವೆ.
ಏನಿದು ಪ್ರಕರಣ?: ಚೀನಾದ ವ್ಯಕ್ತಿಗಳು ನಿಯಂತ್ರಿಸುತ್ತಿರುವ ಕಾನೂನು ಬಾಹಿರ ತ್ವರಿತ ಸ್ಮಾರ್ಟ್ಫೋನ್ ಆಧಾರಿತ ಸಾಲಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 6 ಕಡೆಗಳಲ್ಲಿ ಶುಕ್ರವಾರದಿಂದ ಶೋಧ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ, ಮೊಬೈಲ್ ಮೂಲಕ ಸಣ್ಣ ಮೊತ್ತದ ಸಾಲ ಪಡೆದ ಸಾರ್ವಜನಿಕರ ಸುಲಿಗೆ ಮತ್ತು ಕಿರುಕುಳ ನೀಡುವುದರಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಘಟಕಗಳು,ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸ್ ಸೈಬರ್ ಕ್ರೈ ಠಾಣೆಯಲ್ಲಿ ಕನಿಷ್ಠ 18 ಎಫ್ಐಆರ್ ಗಳು ದಾಖಲಾಗಿವೆ ಎಂದು ಈಡಿ ತಿಳಿಸಿದೆ.







