ಉಡುಪಿ-ಕುಂದಾಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ

ಉಡುಪಿ, ಸೆ.3: ಉಡುಪಿ ಜಿಲ್ಲಾಡಳಿತ, ಜಿಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ೨೦೨೨- ೨೩ನೇ ಸಾಲಿನ ಅವಿಭಜಿತ ಉಡುಪಿ ತಾಲೂಕು ಹಾಗೂ ಕುಂದಾಪುರ- ಬೈಂದೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಶನಿವಾರ ಜರಗಿತು.
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಡುಪಿ ತಾಲೂಕು ಕ್ರೀಡಾಧಿಕಾರಿ ಗೋಪಾಲ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.
ಈ ಕ್ರೀಡಾಕೂಟದಲ್ಲಿ ನಡೆದ ವಾಲಿಬಾಲ್, ಫುಟ್ಬಾಲ್, ಕಬಡ್ಡಿ, ಖೋಖೋ, ಅಥ್ಲೆಟಿಕ್ಸ್‌ನಲ್ಲಿ ಸುಮಾರು ೮೦೦ ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದರು.
ಕುಂದಾಪುರ ತಾಲೂಕು: ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಕುಂದಾಪುರ-ಬೈಂದೂರು ತಾಲೂಕು ಮಟ್ಟದ ಕ್ರೀಡಾಕೂಟವನ್ನು ಕುಂದಾಪುರದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ವಹಿಸಿದ್ದರು.
ಪುರಸಭಾ ಸದಸ್ಯೆ ರೋಹಿಣಿ ಉದಯ ಕುಮಾರ್, ಬೈಂದೂರು ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಅಧಿಕಾರಿ ಪ್ರಭಾಕರ, ಕುಂದಾಪುರದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಬೈಂದೂರಿನ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ, ಪ್ರಕಾಶ್ ಶೆಟ್ಟಿ ಮೊಳಹಳ್ಳಿ ವಂದಿಸಿದರು.







