ಶಬಾನಾ ಅಝ್ಮಿ, ನಾಸಿರುದ್ದೀನ್ ಶಾ, ಜಾವೇದ್ ಅಖ್ತರ್ ಟುಕ್ಡೆ-ಟುಕ್ಡೆ ಗ್ಯಾಂಗ್ ನ ಏಜೆಂಟ್ ಗಳು: ಮ.ಪ್ರ ಗೃಹ ಸಚಿವ

ನರೋತ್ತಮ್ ಮಿಶ್ರಾ - ಮಧ್ಯಪ್ರದೇಶ ಗೃಹ ಸಚಿವ (Photo credit- PTI)
ಹೊಸದಿಲ್ಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರದ ಅಪರಾಧಿಗಳ ಬಿಡುಗಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ನಟಿ ಶಬಾನಾ ಅಜ್ಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra), ಶಬಾನಾ ಅಝ್ಮಿ, ಜಾವೇದ್ ಅಖ್ತರ್ ಮತ್ತು ನಾಸಿರುದ್ದೀನ್ ಶಾ 'ತುಕ್ಡೆ-ತುಕ್ಡೆ' ಗ್ಯಾಂಗ್ನ ಸ್ಲೀಪರ್ ಸೆಲ್ ಏಜೆಂಟ್ಗಳು ಎಂದು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಕನ್ಹಯ್ಯಾಲಾಲ್ ಅವರನ್ನು ಹತ್ಯೆ ಮಾಡಲಾಗಿದೆ, ಆದರೆ, ಅವರ ಬಾಯಿಂದ ಒಂದು ಮಾತು ಬರಲಿಲ್ಲ ಎಂದು ಬಿಜೆಪಿ ನಾಯಕ ಮಿಶ್ರಾ ಲೇವಡಿ ಮಾಡಿದ್ದಾರೆ. ಜಾರ್ಖಂಡ್ನ ದುಮ್ಕಾದಲ್ಲಿ ಬಾಲಕಿಯೊಬ್ಬಳನ್ನು ಸಜೀವ ದಹನ ಮಾಡಿದಾಗ ಈ ಜನರು ಮೌನವಾಗಿದ್ದರು. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಏನಾದರೂ ಅನಾಹುತ ನಡೆದರೆ ಇವರಿಗೆ ದೇಶದಲ್ಲಿ ಇರಲು ಭಯವಾಗುತ್ತದೆ. ನಂತರ ಪ್ರಶಸ್ತಿ ವಾಪ್ಸಿ ಗ್ಯಾಂಗ್ ಸಕ್ರಿಯಗೊಳ್ಳುತ್ತದೆ. ಆಗ ಈ ಜನರು ತಮ್ಮ ಗಂಟಲು ಹರಿದುಕೊಂಡು ಕೂಗುತ್ತಾರೆ. ಈ ಜನರು ತಮ್ಮ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತಾರೆ. ಅಂತವರನ್ನು ಸುಸಂಸ್ಕೃತರು ಮತ್ತು ಜಾತ್ಯತೀತರು ಎಂದು ಹೇಗೆ ಕರೆಯಬಹುದು. ಈಗ ಇವರ ಬಂಡವಾಳವೆಲ್ಲಾ ದೇಶದಲ್ಲಿ ಬಯಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಶಬಾನಾ ಅಝ್ಮಿ ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳ ಬಿಡುಗಡೆಯನ್ನು ಖಂಡಿಸಿದ್ದರು. ಪರಿಸ್ಥಿತಿ ತುಂಬಾ ಭೀಕರವಾಗಿದೆ ಎಂದು ಅವರು ಹೇಳಿದ್ದರು.





