ಪಿಓಕೆ ಮೇಲೆ ಚೀನಾ ಕಣ್ಣು, ಭಾರತಕ್ಕೆ ತೊಡಕು: ಪ್ರೇಮಶೇಖರ್

ಉಡುಪಿ, ಸೆ.3: ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಚೀನಾ ಕಣ್ಣಿಟ್ಟಿದ್ದು, ಇದು ಭಾರತಕ್ಕೆ ಬಹಳ ದೊಡ್ಡ ತೊಡಕಾಗಿದೆ. ಭವಿಷ್ಯದಲ್ಲಿ ಪಾಕಿಸ್ತಾನದ ಮೂಲಕ ಅರಬ್ ದೇಶ ಮತ್ತು ಆಫ್ರಿಕಾದೊಂದಿಗೆ ಸಂಪರ್ಕ ಸಾಧಿಸಲು ಚೀನಾ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿಯೇ 2007ರಿಂದಲೇ ಪಿಓಕೆಯಲ್ಲಿ ಚೀನಾ ಸೇನೆ ಬೀಡುಬಿಟ್ಟಿದೆ ಎಂದು ಅಂಕಣಕಾರ, ಅಂತಾರಾಷ್ಟ್ರೀಯ ವ್ಯವಹಾರ ವಿಶ್ಲೇಷಕ ಪ್ರೇಮಶೇಖರ್ ತಿಳಿಸಿದ್ದಾರೆ.
ಉಡುಪಿ ಸುಹಸಾಂ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಧಾತ್ರಿ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಕಿದಿಯೂರು ಹೊಟೇಲ್ ಅನಂತಶಯನದಲ್ಲಿ ಜರಗಿದ ಸಮಾರಂಭದಲ್ಲಿ ಲೇಖಕ ಎಸ್.ಉಮೇಶ್ ಅವರ ಕಾಶ್ಮೀರ್ ಡೈರಿ ಕೃತಿ ಬಿಡುಗಡೆಗೊಳಿಸಿ ಕೃತಿಯನ್ನು ವಿಶ್ಲೇಷಿಸಿದರು.
ಕಾಶ್ಮೀರ ಇಂದು ಅಭಿವೃದ್ಧಿ ಕಾಣುತ್ತಿದ್ದು, ಈ ಹಿಂದೆ ಪಾಕಿಸ್ತಾನದ ಜೊತೆ ಇದ್ದ ಯುಎಇ ಇದೀಗ ಕಾಶ್ಮೀರದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಇದರಿಂದ ಕಾಶ್ಮೀರ ಆರ್ಥಿಕವಾಗಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಿದೆ. ಇದರಿಂದ ಪಿಓಕೆ ಹಾಗೂ ಪಾಕಿಸ್ತಾನದಲ್ಲಿ ಚೈನಾದ ವಿರುದ್ಧ ದೊಡ್ಡ ಅಂತರ್ಯುದ್ಧ ಆರಂಭವಾಗಬಹುದು. ಆಗ ಪಿಓಕೆಯನ್ನು ಭಾರತದ ಜೊತೆ ಸೇರಿಸಿಕೊಳ್ಳ ಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಗುಲಾಮ್ ನಬಿ ಆಝಾದ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಹತ್ತಿರವಾಗಿದ್ದಾರೆ. ಇದರಿಂದ ಕಾಶ್ಮೀರವನ್ನು ರಾಜಕೀಯವಾಗಿಯೂ ಭಾರತದೊಂದಿಗೆ ಒಂದು ಗೂಡಿಸುವ ಪ್ರಯತ್ನಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಅದೇ ರೀತಿ ಕಾಶ್ಮೀರದ ಅಸ್ಮಿಯತೆಯು ನಮಗೆ ದೊಡ್ಡ ತೊಡಕಾಗಿದ್ದು, ಕೆಲವೇ ಮಂದಿಯ ಕೈಯಲ್ಲಿರುವ ಧ್ವನಿ ಮತ್ತು ಬಂದೂಕು ದೂರ ಮಾಡಿದರೆ ಕಾಶ್ಮೀರವನ್ನು ಮಾನಸಿಕವಾಗಿಯೂ ಭಾರತದ ಜೊತೆಯಾಗಿಸಬಹುದು ಎಂದರು.
ಕಾಶ್ಮೀರವು ಹಿಂದು ಸಂಸ್ಕೃತಿಯ ಮೂಲ ಹಾಗೂ ಭಾರತ ಸಾಹಿತ್ಯದ ಉಗಮ ಸ್ಥಾನ. ಭಾರತದ ಸಂಸ್ಕೃತಿ ಬೆಳವಣಿಗೆಗೆ ಕಾಶ್ಮೀರ ತನ್ನದೇ ಆದ ಮಹತ್ತರ ಪಾತ್ರ ವಹಿಸಿದೆ. ಆದುದರಿಂದ ಕಾಶ್ಮೀರ ಭಾರತಕ್ಕೆ ಬಹಳ ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.
ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸುಹಾಸಂ ಕಾರ್ಯದರ್ಶಿ ಗೋಪಾಲ ಭಟ್, ಲೇಖಕ ಎಸ್.ಉಮೇಶ್ ಉಪಸ್ಥಿತರಿದ್ದರು. ಸುಹಾಸಂ ಅಧ್ಯಕ್ಷ ಶಾಂತರಾಜ್ ಐತಾಳ್ ಸ್ವಾಗತಿಸಿದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು.







