ಕಡವೆ ಮಾಂಸ ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಕುಂದಾಪುರ, ಸೆ.3: ಬೇಟೆಯಾಡಿದ ಕಡವೆಯ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬೈಂದೂರು ಪೊಲೀಸರು ಬೈಂದೂರು ಶಿರೂರು ಬಳಿ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಂಧಿಸಿದ್ದಾರೆ.
ಭಟ್ಕಳದ ನಾಸೀರ್(35) ಹಾಗೂ ಅಬ್ದುಲ್ ಅಲೀಂ(23) ಬಂಧಿತ ಆರೋಪಿಗಳು. ಇವರಿಂದ 19 ಕೆ.ಜಿ. ಕಡವೆ ಮಾಂಸ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂದಾಪುರ ಕಡೆಯಿಂದ ಭಟ್ಕಳ ಕಡೆ ತೆರಳುತ್ತಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ತಪಾಸಣೆ ನಡೆಸಲು ತಡೆದು ನಿಲ್ಲಿಸಿದ್ದು, ಆಗ ಸವಾರರಿಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದರು. ಕೂಡಲೇ ಬೆನ್ನಟ್ಟಿದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಬಳಿಕ ಪರಿಶೀಲನೆ ನಡೆಸಿದಾಗ ಕಡವೆ ಮಾಂಸ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ಪ್ರಕರಣ ವನ್ಯಜೀವಿ ಕಾಯ್ದೆಯಡಿ ದಾಖಲಾಗಬೇಕಾದ ಹಿನ್ನೆಲೆ ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಪೊಲೀಸರು, ಬೈಂದೂರು ವಲಯ ಅರಣ್ಯ ಇಲಾಖೆಯ ವಶಕ್ಕೆ ನೀಡಿದರು. ಬೈಂದೂರು ವಲಯ ಅರಣ್ಯಾಧಿಕಾರಿ ಸಿದ್ದೇಶ್ವರ್ ಹಾಗೂ ಸಿಬ್ಬಂದಿ ತಂಡ ತನಿಖೆ ನಡೆಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.





