ರಾಜಕೀಯದ ನಡುವೆಯೇ ಸೆ.17ರಂದು ಕೇಂದ್ರದಿಂದ ಅಧಿಕೃತವಾಗಿ ಹೈದರಾಬಾದ್ ವಿಮೋಚನಾ ದಿನಾಚರಣೆ

ಹೊಸದಿಲ್ಲಿ,ಸೆ.3: ಹೈದರಾಬಾದ್ನಲ್ಲಿ ಸೆ.17ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಯೊಂದಿಗೆ ಹೈದರಾಬಾದ್ ರಾಜ್ಯ ವಿಮೋಚನೆಯ 75 ವರ್ಷಗಳ ಸ್ಮರಣಾರ್ಥ ವರ್ಷಪೂರ್ತಿ ಕಾರ್ಯಕ್ರಮಗಳನ್ನು ತಾನು ಹಮ್ಮಿಕೊಳ್ಳುವುದಾಗಿ ಕೇಂದ್ರ ಸರಕಾರವು ಪ್ರಕಟಿಸಿದೆ.ಈಗಿನ ಮಹಾರಾಷ್ಟ್ರದ ಮರಾಠವಾಡಾ ಪ್ರದೇಶ,ಕರ್ನಾಟಕದ ಹೈದರಾಬಾದ್-ಕರ್ನಾಟಕ ಪ್ರದೇಶ ಮತ್ತು ಈಗಿನ ತೆಲಂಗಾಣದ ಎಲ್ಲ ಜಿಲ್ಲೆಗಳನ್ನು ಒಳಗೊಂಡಿದ್ದ ಅಂದಿನ ಹೈದರಾಬಾದ್ ಸಂಸ್ಥಾನವನ್ನು 1948,ಸೆ.17ರಂದು ಭಾರತ ಒಕ್ಕೂಟದಲ್ಲಿ ಸೇರ್ಪಡೆಗೊಳಿಸಲಾಗಿತ್ತು.
ತೆಲಂಗಾಣ,ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆದಿರುವ ಕೇಂದ್ರ ಸಂಸ್ಕೃತಿ ಸಚಿವ ಜಿ.ಕಿಶನ ರೆಡ್ಡಿ ಅವರು ಸೆ.17ರಂದು ಹೈದರಾಬಾದ್ನ ಪರೇಡ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದಾರೆ. ಅಮಿತ್ ಶಾ ಜೊತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ತೆಲಂಗಾಣದ ಟಿಆರ್ಎಸ್ ಸರಕಾರವು ಸೆ.17ನ್ನು ‘ವಿಮೋಚನಾ ದಿನ ’ವನ್ನಾಗಿ ಅಧಿಕೃತವಾಗಿ ಆಚರಿಸಬೇಕು ಎಂಬ ಬೇಡಿಕೆಯನ್ನು ಒಪ್ಪಿಕೊಂಡಿಲ್ಲ, ಹೀಗಾಗಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಸ್ಮರಣ ವರ್ಷದ ಉದ್ಘಾಟನಾ ದಿನವನ್ನು ತಮ್ಮ ರಾಜ್ಯಗಳಲ್ಲಿ ಸೂಕ್ತ ಕಾರ್ಯಕ್ರಮಗಳೊಂದಿಗೆ ಆಚರಿಸುವಂತೆಯೂ ರೆಡ್ಡಿ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.ಹೈದರಾಬಾದ್ ಸಂಸ್ಥಾನವನ್ನು ನಿಜಾಮರು ಆಳುತ್ತಿದ್ದರು ಮತ್ತು 1947ರಲ್ಲಿ ದೇಶವು ಸ್ವತಂತ್ರಗೊಂಡಿತ್ತಾದರೂ 1948ರ ಸೆ.17ರಂದಷ್ಟೇ ಅದು ಭಾರತದೊಂದಿಗೆ ವಿಲೀನಗೊಂಡಿತ್ತು. ಈ ಐತಿಹಾಸಿಕ ‘ವಾಸ್ತವ’ವನ್ನು ಹೇಗೆ ನೋಡಬೇಕೆಂಬ ಬಗ್ಗೆ ರಾಜ್ಯದಲ್ಲಿಯ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿವೆ,ಹೀಗಾಗಿ ಸೆ.17ರ ಮಹತ್ವವನ್ನು ಬಣ್ಣಿಸಲು ಯಾವುದೇ ಸ್ವೀಕಾರಾರ್ಹ ನಾಮಕರಣವಾಗಿಲ್ಲ. ಕೆಲವರು ಅದನ್ನು ‘ವಿಮೋಚನಾ ದಿನ ’ ಎಂದು ಕರೆದರೆ ಕೆಲವರು ‘ವಿಲೀನ ದಿನ ’ ಎಂದು ಕರೆಯುತ್ತಾರೆ.
‘ಪೊಲೀಸ್ ಆ್ಯಕ್ಷನ್ ’ ಎಂದು ವ್ಯಾಪಕವಾಗಿ ಕರೆಯಲ್ಪಡುವ ‘ಆಪರೇಷನ್ ಪೋಲೊ’ದಲ್ಲಿ ಭಾರತೀಯ ಸೇನೆಯು ನಡೆಸಿದ್ದ ಮಿಲಿಟರಿ ಕಾರ್ಯಾಚರಣೆಗಳೊಂದಿಗೆ ಈ ದಿನವನ್ನು ಗುರುತಿಸುವ ಇತರರೂ ಇದ್ದಾರೆ. ಭಾರತ ಸರಕಾರವು ಒಪ್ಪಿಕೊಂಡಿದ್ದ ವರದಿಯಂತೆ ಆಪರೇಷನ್ ಪೋಲೊ ಸಂದರ್ಭದಲ್ಲಿ ಮತ್ತು ನಂತರ ಕನಿಷ್ಠ 27,000ದಿಂದ 40,000 ಮುಸ್ಲಿಮರು ಕೊಲ್ಲಲ್ಪಟ್ಟಿದ್ದರು ಎಂದು ಸುದ್ದಿ ಜಾಲತಾಣ ‘ದಿ ವೈರ್’ ಈ ಹಿಂದೆ ವರದಿ ಮಾಡಿತ್ತು.
ಟಿಆರ್ಎಸ್ ಮತ್ತು ರಾಜ್ಯ ಕಾಂಗ್ರೆಸ್ ಸೆ.17ನ್ನು ರಾಷ್ಟ್ರಧ್ವಜಾರೋಹಣ ಮತ್ತು ಸ್ವಾತಂತ್ರ ಹೋರಾಟಗಾರರಿಗೆ ಗೌರವಾರ್ಪಣೆಯೊಂದಿಗೆ ‘ತೆಲಂಗಾಣ ವಿಲೀನ ದಿನ’ವನ್ನಾಗಿ ತಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಆಚರಿಸುತ್ತವೆ. ಇಡೀ ದೇಶಕ್ಕೆ ಒಂದೇ ಸ್ವಾತಂತ್ರ ದಿನವಿದೆ,ಹೀಗಾಗಿ ತೆಲಂಗಾಣದಲ್ಲಿ ಪ್ರತ್ಯೇಕ ಆಚರಣೆಗಳ ಅಗತ್ಯವಿಲ್ಲ ಎನ್ನುವುದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ)ನ ಪ್ರತಿಪಾದನೆಯಾಗಿದೆ. ಹಲವಾರು ಮುಸ್ಲಿಂ ಗುಂಪುಗಳೂ ‘ಪೊಲೀಸ್ ಆ್ಯಕ್ಷನ್ ’ಉಲ್ಲೇಖಿಸಿ ಆಚರಣೆಗಳನ್ನು ವಿರೋಧಿಸಿವೆ.
ಸೆ.17ನ್ನು ‘ವಿಮೋಚನಾ ದಿನ ’ವನ್ನಾಗಿ ಆಚರಿಸಬೇಕು ಎಂದು ಬಿಜೆಪಿ ದೀರ್ಘಕಾಲದಿಂದ ಒತ್ತು ನೀಡುತ್ತ ಬಂದಿದೆ,ಆದರೆ ಟಿಆರ್ಎಸ್ ಸರಕಾರವು ಎಂದೂ ಈ ಬೇಡಿಕೆಯನ್ನು ಒಪ್ಪಿಲ್ಲ. ಎಐಎಂಐಎಂನ ಭೀತಿಯಿಂದಾಗಿ ಟಿಆರ್ಎಸ್ ಸರಕಾರವು ‘ತೆಲಂಗಾಣ ವಿಮೋಚನಾ ದಿನ’ವನ್ನು ಆಚರಿಸಲು ಹಿಂಜರಿಯುತ್ತಿದೆ ಎಂದು ಅಮಿತ್ ಶಾ ಇತ್ತೀಚಿಗೆ ಆರೋಪಿಸಿದ್ದರು.
ಕೇಂದ್ರದ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿಯವರು,ವಸಾಹತುಶಾಹಿ ಮತ್ತು ನಿರಂಕುಶ ಆಡಳಿತದ ವಿರುದ್ಧ ಜನರ ಹೋರಾಟಗಳನ್ನು ಸ್ಮರಿಸುವ ಸಂದರ್ಭವಾಗಿರುವುದರಿಂದ ಸೆ.17ನ್ನು ‘ರಾಷ್ಟ್ರೀಯ ಏಕೀಕರಣ ದಿನ ’ವನ್ನಾಗಿ ಆಚರಿಸಬೇಕು ಎಂದು ಹೇಳಿದ್ದಾರೆ.







