ಮದ್ರಸಾ ಶಿಕ್ಷಣದಲ್ಲಿ ಸರಕಾರದ ಹಸ್ತಕ್ಷೇಪದ ಹಿಂದೆ ಬಿಜೆಪಿಯ ರಾಜಕೀಯ ದುರುದ್ದೇಶವಿದೆ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಸಮಿತಿ ಖಂಡನೆ

ಬೆಂಗಳೂರು, ಸೆ.3: ಇತ್ತೀಚಿಗೆ ರಾಜ್ಯ ಸರಕಾರವು ಮದ್ರಸಾ ಶಿಕ್ಷಣದಲ್ಲಿ ಉದ್ದೇಶಪೂರ್ವಕವಾಗಿ ಹಸ್ತಕ್ಷೇಪ ಮಾಡುತ್ತಿದೆ. ಇದರ ಹಿಂದೆ ಬಿಜೆಪಿ ಪಕ್ಷದ ರಾಜಕೀಯ ದುರುದ್ದೇಶ ಇದೆ. ಆದುದರಿಂದ ಯಾವುದೇ ಕಾರಣಕ್ಕೂ ಮದ್ರಸಾ ಶಿಕ್ಷಣ ವ್ಯವಸ್ಥೆಯಲ್ಲಿ ಸರಕಾರ ಕೈ ಹಾಕಬಾರದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಸಮಿತಿಯು ಎಚ್ಚರಿಸಿದೆ.
ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ರಾಜ್ಯ ಸಮಿತಿ ಸದಸ್ಯ ಜಾಫರ್ ಸಾಧಿಕ್ ಫೈಝಿ ಮಾತನಾಡಿ, ರಾಜ್ಯದಲ್ಲಿ ಈ ಹಿಂದಿನಿಂದಲೂ ಮದ್ರಸಾಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿದ್ದು, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಸಮರ್ಪಿಸುವಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡಿವೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿ, ಅವರಿಗೆ ಜೀವನದ ಮೌಲ್ಯಗಳನ್ನು ಕಲಿಸುವ ಹಾಗೂ ಅವರನ್ನು ಪ್ರಜ್ಞಾವಂತರನ್ನಾಗಿಸುವ ನಿಟ್ಟಿನಲ್ಲಿ ಮದ್ರಸಾಗಳು ಮಹತ್ತರ ಪಾತ್ರ ವಹಿಸಿವೆ. ಆದರೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸುಧಾರಣೆ ತರುವ ನೆಪದಲ್ಲಿ ಮದ್ರಸಾ ಶಿಕ್ಷಣದಲ್ಲಿ ಅನಗತ್ಯ ಹಸ್ತಕ್ಷೇಪದ ಸೂಚನೆ ನೀಡಿದ್ದಾರೆ ಕಳವಳ ವ್ಯಕ್ತಪಡಿಸಿದರು.
ಕೌನ್ಸಿಲ್‍ನ ರಾಜ್ಯಾಧ್ಯಕ್ಷ ಮೌಲಾನ ಅತೀಕ್ ಉರ್ ರೆಹ್ಮಾನ್ ಅಶ್ರಫಿ ಮಾತನಾಡಿ, ಮದ್ರಸಾಗಳೆಂದರೆ ಕೇವಲ ಧಾರ್ಮಿಕ ಸಂಸ್ಥೆಗಳಲ್ಲ. ರಾಜ್ಯದಲ್ಲಿರುವ ಹಲವಾರು ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಶಾಲಾ ಶಿಕ್ಷಣಕ್ಕೂ ಪ್ರೇರಣೆ ನೀಡಲಾಗುತ್ತಿದೆ. ಇನ್ನು ದಿನದಲ್ಲಿ ಒಂದೆರಡು ಗಂಟೆ ಮದ್ರಸಾಗಳಲ್ಲಿ ಕಲಿಯುವ ಅಸಂಖ್ಯಾತ ಮಕ್ಕಳು ದಿನವಿಡೀ ಶಾಲಾ ಶಿಕ್ಷಣದಲ್ಲಿ ತಲ್ಲೀನರಾಗಿರುತ್ತಾರೆ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಮದ್ರಸಾಗಳು ತಮಗೆ ಅನುಕೂಲಕರವಾದ ಉಪಯುಕ್ತ ಪಠ್ಯಕ್ರಮಗಳನ್ನು ಅಳವಡಿಸಿಕೊಂಡಿವೆ ಮತ್ತು ಅವು ಸಮುದಾಯದ ಖರ್ಚಿನಲ್ಲಿಯೇ ಮುಂದುವರಿಯುತ್ತಿವೆ. ಖಾಸಗಿಯಾಗಿ ನಡೆಸಲ್ಪಡುವ ಮದ್ರಸಾಗಳೂ ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿವೆ. ಕೆಲವೊಂದು ಮದ್ರಸಾಗಳಿಗೆ ವಕ್ಫ್‍ಬೋರ್ಡ್ ಸಂಸ್ಥೆಯ ಮೂಲಕ ಸಹಾಯಧನ ದೊರಕುತ್ತಿದ್ದರೂ, ಅಷ್ಟೇನೂ ತೃಪ್ತಿಕರವಾಗಿಲ್ಲ ಎಂದರು.
ಕೌನ್ಸಿಲ್‍ನ ಜಿಲ್ಲಾಧ್ಯಕ್ಷ ಮೌಲಾನಾ ಶಕೀಲ್ ಅಹಮದ್ ಮಾತನಾಡಿ, ರಾಜ್ಯ ಬಿಜೆಪಿ ಸರಕಾರವು ಹಿಜಾಬ್ ಹೆಸರಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಾಲಾ-ಕಾಲೇಜು ಕ್ಯಾಂಪಸ್‍ನಿಂದ ಅಮಾನವೀಯವಾಗಿ ಹೊರಗಿಟ್ಟಿದೆ. ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲವೆಂದು ಹಿಜಾಬ್‍ಗೆ ನಿಷೇಧ ಹೇರಿದ ಅದೇ ಸರಕಾರ ಇಂದು ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿ ಧರ್ಮದ ಹೆಸರಿನಲ್ಲಿ ಮಕ್ಕಳನ್ನು ವಿಭಜನೆ ಮಾಡಲಾಗಿದೆ. ಬಾಬಾಬುಡನ್‍ಗಿರಿ ಹಾಗೂ ಚಾಮರಾಜಪೇಟೆಯ ಈದ್ಗಾ ಮೈದಾನವನ್ನು ವಿವಾದಕ್ಕೆ ಎಳೆದು ತಂದಿದೆ. ಈ ಮೂಲಕ ಬಿಜೆಪಿಯು ಧರ್ಮಗಳನ್ನು ವಿಭಜನೆ ಮಾಡುವ ಮೂಲಕ ಕೋಮು ರಾಜಕಾರಣವನ್ನು ಜೀವಂತವಾಗಿಡಲು ಯೋಜನೆಯನ್ನು ರೂಪಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
''ಮೂಲಭೂತ ಹಕ್ಕುಗಳ ಉಲ್ಲಂಘನೆ''
ಬಿಜೆಪಿ ಸರಕಾರವು ಮದ್ರಸಾ ಶಿಕ್ಷಣ ವ್ಯವಸ್ಥೆಯಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸುತ್ತಿರುವುದು, ಸಂವಿಧಾನದ 25, 29, 30 ವಿಧಿಯ ಧಾರ್ಮಿಕ ಸ್ವಾತಂತ್ರ್ಯವನ್ನು ಸೇರಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಸುಧಾರಣೆಯ ನೆಪದಲ್ಲಿ ಮದ್ರಸಾ ಶಿಕ್ಷಣದಲ್ಲಿ ಮೂಗು ತೂರಿಸುವ ಬಿಜೆಪಿ ಸರಕಾರಕ್ಕೆ ಮುಸ್ಲಿಮ್ ವಿದ್ಯಾರ್ಥಿಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ಒಂದು ವೇಳೆ ಅದಕ್ಕೆ ನಿಜವಾದ ಕಾಳಜಿ ಇರುತ್ತಿದ್ದರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುವ ಸ್ಕಾಲರ್‍ಶಿಪ್ ಯೋಜನೆಯ ಅನುದಾನವನ್ನು ಕಡಿತಗೊಳಿಸುತ್ತಿರಲಿಲ್ಲ.
-ಮೌಲಾನ ಅತೀಕ್ ಉರ್ ರೆಹ್ಮಾನ್ ಅಶ್ರಫಿ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‍ನ ರಾಜ್ಯಾಧ್ಯಕ್ಷ







