ಮಂಗಳೂರು ವಿವಿ; ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಶಿಬಿರ

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗ, ಮಂಗಳೂರು ವಿವಿಯ ಮಂಗಳಾ ದತ್ತು ಗ್ರಾಮ ಯೋಜನೆ ಹಾಗೂ ಸಿಒಡಿಪಿ, ಸ್ಪರ್ಶ ಮತ್ತು ಮರ್ಸಿ ಬ್ಯೂಟಿ ಅಕಾಡೆಮಿಯ ಸಹಯೋಗದೊಂದಿಗೆ ಮಂಗಳೂರು ವಿವಿ ಲಯ ಡಾ.ವೀರೇಂದ್ರ ಹೆಗ್ಗಡೆ ಸೆಮಿನಾಲ್ ಹಾಲ್ ನಲ್ಲಿ ಶನಿವಾರ ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಶಿಬಿರದ ಉದ್ಘಾಟನೆ ನಡೆಯಿತು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಗಾಂಗ ದಾನದಿಂದ ಅದೆಷ್ಟೋ ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಜನರಲ್ಲಿ ಇರುವ ಮೂಡನಂಬಿಕೆಗಳನ್ನು ದೂರಗೊಳಿಸಿ ಅಂಗಾಂಗ ದಾನದ ಮಹತ್ವ ಮತ್ತು ಅರಿವು ಮೂಡಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದು ಹೇಳಿದರು.
ಕ್ಯಾನ್ಸರ್ ಪೀಡಿತರಿಗೆ ಭಯ ಹುಟ್ಟಿಸುವ ಬದಲು ಅವರಿಗೆ ದೈರ್ಯದ ಮೂಲಕ ಸ್ಪೂರ್ತಿ ತುಂಬುವ ಕೆಲಸ ಆಗಬೇಕು. ಕೂದಲು ದಾನದಂತಹ ಇಂತಹ ಶಿಬಿರವು ಒಂದು ಪುಣ್ಯದ ಕೆಲಸವಾಗಿದ್ದು ಮಂಗಳೂರು ವಿವಿಯಲ್ಲಿ ವಿವಿಧ ಸಂಘಗಳ ಮೂಲಕ ನಡೆಯುವ ಪ್ರಥಮ ಕಾರ್ಯಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಮಂಗಳಾ ದತ್ತು ಗ್ರಾಮ ಯೋಜನೆಯ ಮೂಲಕ ಅಂಗಾಂಗ ದಾನದ ಮಹತ್ವ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಅಭಿಯಾನದ ಮೂಲಕ ಮಾಡಲಿದ್ದೇವೆ ಎಂದರು.
ಮಂಗಳೂರು ವಿವಿಯ ಜೀವವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೃಷ್ಣ ಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಿಒಡಿಪಿ ಸ್ಪರ್ಶ ಯೋಜನೆಯ ಸಂಯೋಜಕಿ ಶಿಲ್ಪಾ ಡಿಸೋಜ ಅವರು ಮಾತನಾಡಿ, ಕೂದಲು ದಾನ ಬಗ್ಗೆ ಜನರಿಗೆ ಅರಿವಿನ ಕೊರತೆಯಿದ್ದು ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.
ಕಾರ್ಯಕ್ರಮ ಸಂಯೋಜಕರು ಹಾಗೂ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಪ್ರಶಾಂತ್ ನಾಯ್ಕ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ಮಾರಕ ಕಾಯಿಲೆ ಕ್ಯಾನ್ಸರ್ ನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.2020 ರಲ್ಲಿ ಜಗತ್ತಿನಾದ್ಯಂತ ಈ ಕಾಯಿಲೆಯಿಂದ ಹತ್ತು ಮಿಲಿಯನ್ ಜನ ಮೃತಪಟ್ಟಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದರು.
ಯೆನೆಪೊಯ ಸಂಶೋಧನಾ ಕೇಂದ್ರದ ಡಾ.ಅಶ್ವಿನಿ ಪ್ರಭು ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ್ದರು. ಮರ್ಸಿ ಬ್ಯೂಟಿ ಅಕಾಡೆಮಿಯ ವೀಣ ಉಪಸ್ಥಿತರಿದ್ದರು.
ಜೀವವಿಜ್ಞಾನ ವಿಭಾಗದ ಅಧ್ಯಕ್ಷರಾದ ಪ್ರೊ.ಚಂದ್ರ ಎಂ ಅವರು ಸ್ವಾಗತಿಸಿದರು. ಉಪನ್ಯಾಸಕಿ ಡಾ.ಲವೀನ ಅವರು ವಂದಿಸಿದರು. ದೀಪಿಕಾ ಕೆ.ಎಚ್ ಕಾರ್ಯಕ್ರಮ ನಿರೂಪಿಸಿದರು.