ಅತ್ಯಾಚಾರ ಪ್ರಕರಣ: ಆದೇಶ ಪಾಲಿಸದ ದಿಲ್ಲಿ ಪೊಲೀಸ್; ವರಿಷ್ಠರಿಗೆ ನ್ಯಾಯಾಂಗ ನಿಂದನೆ ನೋಟಿಸ್

ಹೊಸದಿಲ್ಲಿ, ಸೆ. ೩: ಮಹಿಳೆಯ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆದೇಶವನ್ನು ಉದ್ದೇಶಪೂರ್ವಕವಾಗಿ ಅನುಸರಿಸದ ನಗರದ ಪೊಲೀಸ್ ಆಯುಕ್ತರಿಗೆ ದಿಲ್ಲಿ ನ್ಯಾಯಾಲಯ ನ್ಯಾಯಾಂಗ ನಿಂದನೆ ನೋಟಿಸು ಜಾರಿ ಮಾಡಿದೆ. ಪ್ರಕರಣದ ಆರೋಪಿಯೊಬ್ಬರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಆಗಸ್ಟ್ ೩೧ರಂದು ವಿಚಾರಣೆ ನಡೆಸಿದ ಸಂದರ್ಭ ನ್ಯಾಯಾಲಯ ಈ ನೋಟಿಸು ಜಾರಿ ಮಾಡಿದೆ.
ಮಹಿಳೆ ದೂರು ದಾಖಲಿಸಿದ ೩೬ ದಿನಗಳ ಬಳಿಕವೇ ನಗರದ ಸಂಗಮ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಯಾದವ್ ಅವರು ಗಮನಿಸಿದ್ದಾರೆ. ಆಗಸ್ಟ್ ೧೭, ೨೪ ಹಾಗೂ ೨೯ರಂದು ನ್ಯಾಯಾಲಯ ಜಾರಿ ಮಾಡಿದ ಮೂರು ಆದೇಶಗಳನ್ನು ಪೊಲೀಸ್ ಆಯುಕ್ತರು ಅನುಸರಿಸಿಲ್ಲ ಎಂದು ನ್ಯಾಯಾಧೀಶರು ಗಮನಿಸಿದ್ದಾರೆ.
ಆದೇಶವನ್ನು ಅನುಸರಿಸದೇ ಇರುವುದಕ್ಕೆ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಗಳನ್ನು ಯಾಕೆ ತೆಗೆದುಕೊಳ್ಳಬಾರದು ಎಂಬುದಕ್ಕೆ ಕಾರಣ ತಿಳಿಸುವಂತೆ ದಿಲ್ಲಿ ಪೊಲೀಸ್ ಆಯುಕ್ತರಿಗೆ ನೋಟಿಸು ಜಾರಿ ಮಾಡಲಾಗುವುದು ಎಂದು ಯಾದವ್ ಅವರು ಹೇಳಿದ್ದರು.
ಪೊಲೀಸ್ ಅಧಿಕಾರಿಗಳು ದೂರುದಾರೆಯನ್ನು ಆರೋಪಿಯಂತೆ ನಡೆಸಿಕೊಂಡಿದ್ದಾರೆ. ಅವರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತೆ ಮಾಡಿದ್ದಾರೆ ಎಂಬುದನ್ನು ಈ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯ ಗಮನಿಸಿತ್ತು.
ಈ ಪ್ರಕರಣದ ಕುರಿತಂತೆ ನ್ಯಾಯಯುತ ಹಾಗೂ ಪಾರದರ್ಶಕ ತನಿಖೆ ನಡೆಸುವಂತೆ ಹಾಗೂ ಪ್ರತಿಕ್ರಿಯೆ ಸಲ್ಲಿಸುವಂತೆ ಪೊಲೀಸ್ ಉಪ ಆಯುಕ್ತ (ದಕ್ಷಿಣ)ರಿಗೆ ನ್ಯಾಯಾಲಯ ಆಗಸ್ಟ್ ೮ರಂದು ನಿರ್ದೇಶಿಸಿತ್ತು.







