‘ಸಿಲಿಕಾನ್ ಸಿಟಿ' ಬೆಂಗಳೂರು ಈಗ ಬಿಜೆಪಿ ಆಡಳಿತದಿಂದ ‘ಸಿಂಕಿಂಗ್ ಸಿಟಿ'ಯಾಗಿದೆ: ಕಾಂಗ್ರೆಸ್ ಲೇವಡಿ

ಬೆಂಗಳೂರು, ಸೆ. 4: ‘ಬಿಜೆಪಿಯವರು ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕೆನ್ನುತ್ತಾರೆ, ಕರ್ನಾಟಕದಲ್ಲಿ ಹಿಂದಿ ಹೇರಿಕೆ ನಡೆಸುತ್ತಾರೆ, ಬೆಳಗಾವಿ ಗಡಿ ವಿಚಾರಕ್ಕೆ ನಿರಾಸಕ್ತಿ ತೋರುತ್ತಾರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ತಮಗೆ ಕನ್ನಡ ನಾಡು, ನುಡಿಯ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದಿರುವುದೇಕೆ?ಗಡಿ ಕಬಳಿಕೆ ತಡೆಗಟ್ಟುವ ಇಚ್ಛಾಶಕ್ತಿ ರಾಜ್ಯ ಸರಕಾರಕ್ಕೆ ಇಲ್ಲದಿರುವುದೇಕೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬೆಂಗಳೂರು, ಕಾಂಗ್ರೆಸ್ ಅವಧಿಯಲ್ಲಿ-ಸಿಲಿಕಾನ್ ಸಿಟಿ, ಬಿಜೆಪಿ ಅವಧಿಯಲ್ಲಿ-ಸಿಂಕಿಂಗ್ ಸಿಟಿ!, ಕಾಂಗ್ರೆಸ್ ಶ್ರಮದಿಂದ ಐಟಿ-ಸಿಟಿ ಎಂಬ ಬೆಂಗಳೂರಿನ ಜಾಗತಿಕ ಹೆಗ್ಗುರುತನ್ನು ಬಿಜೆಪಿಯ ಶೇ.40ರಷ್ಟು ಕಮಿಷನ್ ಸರಕಾರ ಅಕ್ಷರಶಃ ಸರ್ವನಾಶ ಮಾಡಿದೆ. ಒಂದು ಭ್ರಷ್ಟ ಸರಕಾರ ರಾಜ್ಯವನ್ನ ಹೇಗೆ ಮುಳುಗಿಸಬಹುದು ಎನ್ನಲು ಬಿಜೆಪಿ ಸರಕಾರವೇ ಸಾಕ್ಷಿ' ಎಂದು ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಹೊಂದಿರುವ SC- STಗಳಿಗೆ ಗೃಹ ಬಳಕೆಗೆ 75 ಯುನಿಟ್ ಉಚಿತ ವಿದ್ಯುತ್ ಯೋಜನೆ: ಆದೇಶ ಹಿಂಪಡೆದ ಸರ್ಕಾರ
‘ತರಕಾರಿ ಬೆಲೆಗಳ ಏರಿಳಿತ ನಿಯಂತ್ರಿಸಲು ‘ಟಾಪ್ ಪ್ರೈಸ್ ಫಂಡ್' ನಿಗಧಿ ಮಾಡುತ್ತೇವೆ ಎನ್ನುವುದು ಬಿಜೆಪಿಯ ಪ್ರಣಾಳಿಕೆಯ ಭರವಸೆ.ಆದರೆ, ಈಗ ತರಕಾರಿ ಬೆಲೆಗಳು ‘ಟಾಪ್'ನಲ್ಲಿದೆ, ಬಿಜೆಪಿಗೆ ತನ್ನ ಮಾತು ಮರೆತುಹೋಗಿದೆ.ಬೆಲೆ ಏರಿಕೆಯಿಂದ ಜನಸಾಮಾನ್ಯರು ಅನುಭವಿಸುತ್ತಿರುವ ಕಷ್ಟ ಕಾಣ್ತಾ ಇಲ್ವಾ ಬಿಜೆಪಿ ಸರಕಾರಕ್ಕೆ'
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ







