ಶಾಲೆಯಲ್ಲಿ ಕಡ್ಡಾಯವಾಗಿ ಶಿಕ್ಷಕರ ದಿನಾಚರಣೆಗೆ ಆದೇಶ: ರಘುಪತಿ ಭಟ್

ರಘುಪತಿ ಭಟ್
ಉಡುಪಿ, ಸೆ.4: ಈ ಬಾರಿ ಶಿಕ್ಷಕರ ದಿನವನ್ನು ಪ್ರತಿ ಶಾಲೆಯಲ್ಲಿ ಪೋಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡು ಕಡ್ಡಾಯವಾಗಿ ಆಚರಿಸುವಂತೆ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು(ಆಡಳಿತ) ಆದೇಶಿಸಿದ್ದಾರೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಈ ದಿನದಂದು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರಿಗೆ ಕಾಲು ಮುಟ್ಟಿ ನಮಸ್ಕರಿ ಸುವ, ಗೌರವವನ್ನು ಸೂಚಿಸುವ ಪರಂಪರೆಯನ್ನು ಆರಂಭಿಸಬೇಕು. ಶಾಲಾ ಹಂತದ ಸಂಭ್ರಮ ಮುಗಿದ ಬಳಿಕವೇ ತಾಲೂಕು ಮತ್ತು ಜಿಲ್ಲಾ ಹಂತದ ಶಿಕ್ಷಕ ದಿನಾಚರಣೆಗಳು ನಡೆಯಬೇಕು ಎಂಬ ಮನವಿಯನ್ನು ಮಾಡಿದ್ದು, ಅದರಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲೆಯ ಪ್ರತಿಯೊಂದು ಶಾಲೆ ಯಲ್ಲಿಯೂ ಮಕ್ಕಳ ಮತ್ತು ಪೋಷಕರ ಸಹಯೋಗದಲ್ಲಿ ಬೆಳಗಿನ ಅವಧಿಯಲ್ಲಿ ಶಾಲಾ ಹಂತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಕಡ್ಡಾಯಗೊಳಿಸಿ ಆದೇಶ ನೀಡಿದ್ದಾರೆ. ಮುಂದಿನ ವರ್ಷದಿಂದ ಇದು ರಾಜ್ಯ ವ್ಯಾಪ್ತಿ ವಿಸ್ತಾರಗೊಳ್ಳಬೇಕು ಎಂದು ರಘುಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





