ಬ್ರಹ್ಮಾವರ ಕೃಷಿ ವಿವಿಯ 11 ಎಕರೆ ಜಾಗದಲ್ಲಿ ತ್ಯಾಜ್ಯ ಘಟಕ; ಗ್ರಾಮಸ್ಥರಿಂದ ವಿರೋಧ
ಕಾನೂನು ಹೋರಾಟ, ಗ್ರಾಪಂ ಮುತ್ತಿಗೆಯ ಎಚ್ಚರಿಕೆ

ಬ್ರಹ್ಮಾವರ, ಸೆ.4: ಚಾಂತಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರೂರು ಗ್ರಾಮದ ಕಾಡೋಳಿಯಲ್ಲಿರುವ ಕೃಷ್ಣಿ ವಿಶ್ವವಿದ್ಯಾನಿಲಯದ ಸುಮಾರು 11 ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಸಿ ಕಸ ವಿಲೇವಾರಿ ಘಟಕಕ್ಕೆ ಹೇರೂರು, ಹೆರಂಜೆ, ಕಾಡೋಳಿ, ಉಗ್ಗೇಲ್ ಬೆಟ್ಟು ಗ್ರಾಮಸ್ಥರು ಒಕ್ಕೋರೊಳಿನ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಘಟಕವನ್ನು ಕೈಬಿಡದಿದ್ದರೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಹಾಗೂ ಚಾಂತಾರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಅಲ್ಲದೆ ಇದರ ವಿರುದ್ಧ ಕಾನೂನು ಹೋರಾಟ ಕೂಡ ನಡೆಸಲಾಗುವುದು ಎಂದು ಗ್ರಾಮಸ್ಥರು ಹೇರೂರು ಶಾಲಾ ವಠಾರದಲ್ಲಿ ರವಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಆ.30ರಂದು ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಕೃಷಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಚಾಂತಾರು, ವಾರಂಬಳ್ಳಿ, ಹಂದಾಡಿ ಗ್ರಾಪಂಗಳ ಘನ ತ್ಯಾಜ್ಯ ನಿರ್ವಹಣೆ ಮಾಡುವುದಕ್ಕೆ ಸ್ಥಳ ಗುರುತಿಸುವ ಬಗ್ಗೆ ಚರ್ಚಿಸಲಾಗಿದ್ದು, ಕೃಷಿ ವಿವಿಯ ಸ್ವಾಧೀನದಲ್ಲಿರುವ ಚಾಂತಾರು ಗ್ರಾಪಂನ 2.40 ಎಕರೆ ಸ್ಥಳಕ್ಕೆ ಬದಲಾಗಿ ಸರ್ವೆ ನಂ.106ರಲ್ಲಿರುವ ವಿವಿಯ 11 ಎಕರೆ ಜಾಗವನ್ನು ಚಾಂತಾರು ಗ್ರಾಪಂಗೆ ಹಸ್ತಾಂತರಿಸುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ವಿವಿ ಕುಲಪತಿಗಳಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗಿತ್ತು.
ಅಧಿಕೃತವಾಗಿ ಸ್ಪಷ್ಟಪಡಿಸಲಿ
ಸ್ಥಳೀಯ ಮುಖಂಡ ಜ್ಞಾನ ವಸಂತ ಶೆಟ್ಟಿ ಮಾತನಾಡಿ, ಇಲ್ಲಿ ಯಾವುದೇ ಕಾರಣಕ್ಕೂ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಲು ಬಿಡುವುದಿಲ್ಲ. ಇದರ ವಿರುದ್ಧ ಹೋರಾಟಕ್ಕೆ ಎಲ್ಲರು ಕಠಿಬದ್ಧರಾಗಿದ್ದೇವೆ. ಈ ವಿಚಾರದಲ್ಲಿ ಯಾರನ್ನು ನಂಬದೆ ಇರದಿರುವುದರಿಂದ ಕಾನೂನು ಹೋರಾಟ ಸಿದ್ಧರಿದ್ದೇವೆ. ಗ್ರಾಮಸ್ಥರು ಸ್ಥಳೀಯ ಶಾಸಕರನ್ನು ಕರೆಸಿ ಮನವಿಯನ್ನು ಸಲ್ಲಿಸಲು ತೀರ್ಮಾನಿಸಿದ್ದಾರೆ.ಈ ಸಂದರ್ಭದಲ್ಲಿ ಶಾಸಕರು ಇಲ್ಲಿ ಘಟಕ ಮಾಡುವುದಿಲ್ಲ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಬೇಕು. ಇದಕ್ಕೆ ತಪ್ಪಿದರೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಬೇಕಾಗು ತ್ತದೆ ಎಂದು ಹೇಳಿದರು.
ಚಾಂತಾರು ಗ್ರಾಪಂ ಸದಸ್ಯ ಉದಯ ಕಾಮತ್ ಮಾತನಾಡಿ, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಪರಿಸರದಲ್ಲಿ 100 ಕ್ಕೂ ಅಧಿಕ ಮನೆಗಳಿವೆ. ಸುಮಾರು 300 ಮೀಟರ್ ದೂರದಲ್ಲಿ ಹೊಳೆ ಇದೆ. ಇದರಿಂದ ಹೊಳೆಯ ನೀರು ಕಲುಷಿತವಾಗುವ ಸಾಧ್ಯತೆ ಇದೆ. ಅಲ್ಲದೆ ಸುತ್ತಮುತ್ತಲಿನ ಎಲ್ಲ ಗ್ರಾಮಕ್ಕೂ ಸಮಸ್ಯೆ ಆಗಬಹುದು. ಮುಂದೆ ನಮ್ಮ ಗ್ರಾಮ ಕೊಳಚೆ ಪ್ರದೇಶ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಆದುದರಿಂದ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಉಗ್ರ ಹೋರಾಟ ನಾವೆಲ್ಲ ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಸ್ಥಳೀಯ ಮುಖಂಡರಾದ ಸುನೀಲ್ ಸೂಡ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಅಮೀನ್, ಹೇರೂರು ಮಹಾಲಿಂಗೇಶ್ವರ ದೇವಳದ ಅರ್ಚಕ ಆನಂದ ಭಟ್, ಬಿಜೆಪಿ ಮುಖಂಡ ಸುಪ್ರಸಾದ್ ಶೆಟ್ಟಿ, ಮಾಜಿ ಗ್ರಾಪಂ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಮಧುಸೂದನ್ ಹೇರೂರು, ಹಾರಾಡಿ ಗ್ರಾಪಂ ಸದಸ್ಯ ಕುಮಾರ್ ಬೈಕಾಡಿ ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಶಾಸಕರ ಅನುಪಸ್ಥಿತಿ ಬಗ್ಗೆ ಅಸಮಾಧಾನ
ಗ್ರಾಮಸ್ಥರ ಪ್ರಮುಖ ಸಮಸ್ಯೆಯ ಕುರಿತು ಚರ್ಚಿಸುವ ಈ ಸಭೆಯಲ್ಲಿ ಶಾಸಕ ರಘುಪತಿ ಭಟ್ ಹಾಜರು ಇರಬೇಕಿತ್ತು. ಅವರು ಯಾಕೆ ಬಂದಿಲ್ಲ? ಶಾಸಕರು ಈ ವಿಚಾರದಲ್ಲಿ ನಮಗೆ ಬೆಂಬಲವಾಗಿ ಇರಬೇಕೆ ಹೊರತು ತಟಸ್ಥರಾಗಿ ಇರು ವುದು ಅಲ್ಲ ಎಂದು ಸ್ಥಳೀಯರಾದ ಪ್ರಸನ್ನ ಕುಮಾರ್ ಶೆಟ್ಟಿ ಹೆರಂಜಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಅಧ್ಯಕ್ಷತೆಯಲ್ಲಿಯೇ ಸಭೆ ನಡೆಸಿ ಈ ಘಟಕಕ್ಕೆ ಜಾಗ ಪಡೆಯುವ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲಾಗಿದೆ. ಶಾಸಕರು ಸಭೆಗೆ ಬಂದು ನಾನು ಗ್ರಾಮಸ್ಥರೊಂದಿಗೆ ಇದ್ದೇವೆ ಎಂದು ಹೇಳ ಬೇಕಿತ್ತು. ಅವರು ನಮ್ಮೊಂದಿಗೆ ನಿಲ್ಲಬೇಕು ಮತ್ತು ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು. ಇದರಲ್ಲಿ ರಾಜಕೀಯ ಇಲ್ಲ. ನಮಗೆ ಬೇಕಿರುವುದು ನಮ್ಮ ಮನೆ, ಗ್ರಾಮ, ಜನರು. ಪಕ್ಷ, ಧರ್ಮ, ಜಾತಿ ಬಿಟ್ಟು ನಾವೆಲ್ಲ ಒಟ್ಟಾಗಿ ಗ್ರಾಮವನ್ನು ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಅಶೋಕ್ ಹೇರೂರು, ಸಂತೋಷ್, ಗ್ರಾಮಸ್ಥರು ಅಭಿಪ್ರಾಯಪಟ್ಟರು.









