ಪ್ರತಿಪಕ್ಷ ತನ್ನದೇ ಬಲೆಯಲ್ಲಿ ಸಿಲುಕಲಿದೆ ಎಂದ ಜಾರ್ಖಂಡ್ ಸಿಎಂ
ವಿಶ್ವಾಸಮತಕ್ಕಾಗಿ ರಾಂಚಿಗೆ ಮರಳಿದ ಶಾಸಕರು

Hemant Soren
ರಾಂಚಿ,ಸೆ.4: ಪ್ರತಿಪಕ್ಷವು ಆಡಳಿತ ಪಾಳಯಕ್ಕಾಗಿ ಹೂಡಿರುವ ಬಲೆಯಲ್ಲಿ ತಾನೇ ಸಿಲುಕಲಿದೆ ಎಂದು ಗಣಿಗಾರಿಕೆ ಲೀಸ್ ವಿವಾದದ ನಡುವೆ ತನ್ನ ಶಾಸಕ ಸ್ಥಾನದ ಅಸ್ತಿತ್ವದ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.
ಈ ನಡುವೆ ಜಾರ್ಖಂಡ್ನಲ್ಲಿಯ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಕಳೆದ ಕೆಲವು ದಿನಗಳಿಂದ ಛತ್ತೀಸ್ಗಡದ ರಾಜಧಾನಿ ರಾಯಪುರದಲ್ಲಿ ಮೊಕ್ಕಾಂ ಹೂಡಿದ್ದ ರಾಜ್ಯದ ಆಡಳಿತ ಮೈತ್ರಿಕೂಟದ ಸದಸ್ಯರು ರವಿವಾರ ರಾಂಚಿಗೆ ಮರಳಿದ್ದಾರೆ.
ಸೋಮವಾರ ನಡೆಯಲಿರುವ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಸೊರೇನ್ ತನ್ನ ಬಹುಮತವನ್ನು ಸಾಬೀತುಗೊಳಿಸಲು ವಿಶ್ವಾಸಮತವನ್ನು ಯಾಚಿಸಲಿದ್ದಾರೆ.
ಸದನದಲ್ಲಿ ತನ್ನ ಕಾರ್ಯತಂತ್ರವನ್ನು ರೂಪಿಸಲು ಬಿಜೆಪಿ ರವಿವಾರ ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಿದೆ.
ಲಾಭದಾಯಕ ಹುದ್ದೆ ಪ್ರಕರಣದಲ್ಲಿ ಸೊರೇನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಕೋರಿ ಬಿಜೆಪಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ತನ್ನ ನಿರ್ಧಾರವನ್ನು ಆ.25ರಂದು ರಾಜ್ಯಪಾಲ ರಮೇಶ ಬೈಸ್ ಅವರಿಗೆ ರವಾನಿಸಿದ ಬಳಿಕ ಜಾಖಂಡ್ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.
ಚುನಾವಣಾ ಆಯೋಗದ ನಿರ್ಧಾರವನ್ನು ಇನ್ನೂ ಅಧಿಕೃತಗೊಳಿಸಿಲ್ಲವಾದರೂ ಅದು ಸೊರೇನ್ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಶಿಫಾರಸು ಮಾಡಿದೆ ಎಂಬ ವದಂತಿಗಳು ಹುಟ್ಟಿಕೊಂಡಿವೆ.
81 ಸದಸ್ಯ ಬಲದ ಸದನದಲ್ಲಿ ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟವು ಸಂಪೂರ್ಣ ಬಹುಮತವನ್ನು ಹೊಂದಿರುವುದರಿಂದ ಶಾಸಕನಾಗಿ ಮುಖ್ಯಮಂತ್ರಿಯ ಅನರ್ಹತೆಯು ಸರಕಾರದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಆಡಳಿತಾರೂಢ ಯುಪಿಎ ಹೇಳಿದೆ.
ಹಲವಾರು ಯುಪಿಎ ಶಾಸಕರು ಸೆ.1ರಂದು ತನ್ನನ್ನು ಭೇಟಿಯಾದ ಬಳಿಕ ರಾಜ್ಯಪಾಲರು ದಿಲ್ಲಿಗೆ ತೆರಳಿದ್ದು ಇನ್ನಷ್ಟು ವದಂತಿಗಳನ್ನು ಹುಟ್ಟುಹಾಕಿದೆ.







