ಬಿಜೆಪಿ-ಸಂಘ ಪರಿವಾರದ ನಾಯಕರು ದೇಶ ವಿಭಜಿಸುತ್ತಿದ್ದಾರೆ: ರಾಹುಲ್ ಗಾಂಧಿ

ಹೊಸದಿಲ್ಲಿ, ಸೆ. 4: ಬಿಜೆಪಿ (BJP) ಹಾಗೂ ಸಂಘ ಪರಿವಾರದ (Sangh Parivar) ನಾಯಕರು ದೇಶವನ್ನು ವಿಭಜಿಸುತ್ತಿದ್ದಾರೆ. ಅಲ್ಲದೆ, ಉದ್ದೇಶಪೂರ್ವಕವಾಗಿ ಭೀತಿ ಹಾಗೂ ದ್ವೇಷವನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.
ಇಲ್ಲಿನ ರಾಮ್‌ಲೀಲಾ ಮೈದಾನದಲ್ಲಿ (Ramleela Maidan) ರವಿವಾರ ನಡೆದ ‘ಮೆಹ್ನಂಗಾಯಿ ಪರ್ ಹಲ್ಲಾ ಬೋಲ್’ ರ್ಯಾಲಿಯಲ್ಲಿ (Mehangai Par Halla Bol rally) ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ದ್ವೇಷ ಹಾಗೂ ಆಕ್ರೋಶ ಹೆಚ್ಚುತ್ತಿದೆ ಎಂದರು.
ದೇಶದಲ್ಲಿರುವ ದ್ವೇಷ ಹಾಗೂ ಭಯದಿಂದ ಇಬ್ಬರು ಉದ್ಯಮಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಬಿಜೆಪಿ ಕಾರ್ಯ ನಿರ್ವಹಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
‘‘ಕೇಂದ್ರ ಸರಕಾರದ ಮೂರು ಕರಾಳ ಕೃಷಿ ಕಾಯ್ದೆಗಳು ರೈತರಿಗೆ ನೆರವು ನೀಡುವ ಉದ್ದೇಶ ಹೊಂದಿರಲಿಲ್ಲ. 2-3 ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿ ಕೊಡುವ ಉದ್ದೇಶ ಹೊಂದಿತ್ತು’’ ಎಂದು ಅವರು ಹೇಳಿದ್ದಾರೆ.
ಮಾಧ್ಯಮ ನಮ್ಮೊಂದಿಗೆ ಇಲ್ಲದೇ ಇರುವುದರಿಂದ ‘‘ಭಾರತ್ ಜೋಡೋ ಯಾತ್ರೆ’’ ಕೈಗೊಳ್ಳಲಾಗುತ್ತಿದೆ. ನ್ಯಾಯಾಂಗ, ಚುನಾವಣಾ ಆಯೋಗದಂತಹ ಇತರ ಸಂಸ್ಥೆಗಳ ಮೇಲೆ ಕೂಡ ಸರಕಾರದ ಒತ್ತಡ ಇದೆ. ಆದುದರಿಂದ ಪ್ರತಿಪಕ್ಷ ಜನರ ಬಳಿಗೆ ನೇರವಾಗಿ ತೆರಳಿ ಸರಕಾರದ ಕುರಿತು ಸತ್ಯವನ್ನು ತಿಳಿಸುವ ಹೊರತು ಬೇರೆ ದಾರಿ ಇಲ್ಲ ಎಂದು ಅವರು ಹೇಳಿದರು.
ಜನರಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಂಸತ್ತಿನಲ್ಲಿ ಮಾತನಾಡಲು ಪ್ರತಿಪಕ್ಷಗಳಿಗೆ ಅವಕಾಶ ನೀಡಲಿಲ್ಲ ಎಂದು ಅವರು ಒತ್ತಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ‘‘ಈ ದೇಶ ನಿಮ್ಮ ಇಬ್ಬರು ಗೆಳೆಯರಿಗೆ ಮಾತ್ರ ಸೇರಿದ್ದಲ್ಲ. ಬದಲಾಗಿ ಬಡ ಜನರಿಗೆ ಕೂಡ ಸೇರಿದ್ದು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ’’ ಎಂದರು.
ಯುಪಿಎ ಸರಕಾರ ಕೇಂದ್ರದಲ್ಲಿದ್ದಾಗ 27 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿತ್ತು. ಈ ಸರಕಾರ ಅವರನ್ನು ಮತ್ತೊಮ್ಮೆ ಬಡತನಕ್ಕೆ ತಳ್ಳಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಮೋದಿ ಸರಕಾರಕ್ಕೆ ಇಬ್ಬರು ಸಹೋದರರು-ನಿರುದ್ಯೋಗ, ಹಣದುಬ್ಬರ: ಕಾಂಗ್ರೆಸ್
ಬೆಲೆ ಏರಿಕೆ ಕುರಿತಂತೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಮೋದಿ ಸರಕಾರಕ್ಕೆ ಇಬ್ಬರು ಸಹೋದರರು. ಅವರು ನಿರುದ್ಯೋಗ ಹಾಗೂ ಹಣದುಬ್ಬರ ಎಂದಿದೆ.
ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 2024ರ ಚುನಾವಣಾ ಪ್ರಚಾರಕ್ಕಾಗಿ ಈ ರ್ಯಾಲಿ ನಡೆಸುತ್ತಿಲ್ಲ. ಬದಲಾಗಿ ಜನರ ಮುಂದಿರುವ ಎರಡು ಅತಿ ದೊಡ್ಡ ಸವಾಲಾದ ಹಣದುಬ್ಬರ ಹಾಗೂ ನಿರುದ್ಯೋಗದ ಕುರಿತು ಗಮನ ಸೆಳೆಯಲು ಈ ರ್ಯಾಲಿ ನಡೆಸುತ್ತಿದ್ದೇವೆ ಎಂದರು.







