ಸಬ್ ಕಾ ಮಾಲಿಕ್ ಏಕ್ ಹೈ: ಬೇಲಿಮಠ ಶಿವರುದ್ರ ಸ್ವಾಮೀಜಿ
ಬೆಂಗಳೂರಿನಲ್ಲಿ ‘ಹುಸೇನ್ ಡೇ’ ಕಾರ್ಯಕ್ರಮ

ಬೆಂಗಳೂರು, ಸೆ.4: ಸಬ್ ಕಾ ಮಾಲಿಕ್ ಏಕ್ ಹೈ ಎಂಬ ಮಾತನ್ನು ನಾವೆಲ್ಲ ನಂಬಬೇಕು. ಧರ್ಮ ಹೇಳುವ ಮಾನವೀಯತೆ ಮತ್ತು ಸನ್ನಡತೆ ಪಾಲಿಸಿ ನಾವು ಒಂದಾಗಬೇಕು ಎಂದು ಬೇಲಿಮಠ ಸಂಸ್ಥಾನದ ಶಿವರುದ್ರ ಸ್ವಾಮೀಜಿ ಕರೆ ನೀಡಿದರು.
ರವಿವಾರ ನಗರದ ಜಾನ್ಸನ್ ಮಾರ್ಕೆಟ್ ಬಳಿಯಿರುವ ಶಿಯಾ ಖಬರಸ್ಥಾನ್ ಆವರಣದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞ ಆಗಾ ಸುಲ್ತಾನ್ ಆಯೋಜಿಸಿದ್ದ ಇಮಾಮ್ ಹುಸೇನ್ ಡೇ (ಇಮಾಮ್ ಹುಸೇನ್ ಆಚರಣೆ) ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲ ಧರ್ಮಗಳ ಸಾರ ಒಂದೇ ಆಗಿದ್ದರೂ ಸಮಾಜದ ಸ್ವಾಸ್ಥ್ಯ ಕೆಡಿಸುವವರನ್ನು ನಿಯಂತ್ರಣಕ್ಕೆ ತರುವ ಕೆಲಸ ಎಲ್ಲರಿಂದಲೂ ನಡೆಯಬೇಕು ಎಂದರು.
ಇಂದು ಪೈಶಾಚಿಕ ಕೃತ್ಯಗಳಿಗೆ ತಡೆ ಬೀಳಬೇಕಿದೆ. ಪರಿಶುದ್ಧ ಜೀವನ ನಡೆಸಿ ನೆಮ್ಮದಿ ಕಾಣಬೇಕಿದೆ. ಧರ್ಮ, ದೇವರು ಹೆಸರಿನ ಮೇಲೆ ನಿಂತ ಜಗತ್ತು ನಂಬಿಕೆಯಿಂದ ವಂಚಿತವಾಗಬಾರದು. ಉದಾತ್ತ ಚಿಂತನೆ ಮೂಲಕ ಸಮಾಜದ ಒಳಿತನ್ನು ಬಯಸಬೇಕು. ಮನುಷ್ಯ ಮೊದಲು ತನ್ನಲ್ಲಿ ದೇವರನ್ನು ಕಾಣಬೇಕು. ಜ್ಞಾನಿ ಸರ್ವತ್ರ ಪೂಜ್ಯತೆ. ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ತಪ್ಪು ಅರಿತು ನಡೆದರೆ ಮಾತ್ರ ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಾನೆ. ಕ್ಷಮೆಗೆ ಅರ್ಹವಲ್ಲದ ತಪ್ಪು ಮಾಡಿದ ವ್ಯಕ್ತಿ ಎಲ್ಲರಿಂದ ತಪ್ಪಿಸಿಕೊಳ್ಳಬಹುದು. ಆದರೆ, ಮನಸ್ಸಿನಲ್ಲಿರುವ ಮಹಾದೇವನಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಬಿಷಪ್ ಕಾನ್ಫರೆನ್ಸ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ವಸೈ ಆರ್ಚ್‍ಬಿಷಪ್ ಫೆಲಿಕ್ಸ್ ಆಂಥೋನಿ ಮಚಾಡೊ ಮಾತನಾಡಿ, ಇಮಾಮ್ ಹುಸೇನ್ ಅವರ ತ್ಯಾಗವು ಬಲಿದಾನದ ಸಂದೇಶ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅದನ್ನು ಎಲ್ಲರೂ ಅರಿತು ಪಾಲಿಸುವ ಅವಶ್ಯಕತೆ ಇದೆ ಎಂದು ನುಡಿದರು.
ಶಿಕ್ಷಣ ತಜ್ಞ ಆಗಾ ಸುಲ್ತಾನ್ ಮಾತನಾಡಿ, ಶೀಘ್ರದಲ್ಲಿಯೇ ಇಮಾಮ್ ಹುಸೇನ್ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡಲಾಗುವುದು.ಇದಕ್ಕೆ ಕ್ರೈಸ್ತ ಸಮುದಾಯವು ಬೆಂಬಲ ನೀಡಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳ ಸಿದ್ಧತೆ ಆರಂಭಿಸುವ ಚಿಂತನೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಗುರುದ್ವಾರದ ಮುಖ್ಯಸ್ಥ ಗಿಯಾನಿ ಜಸ್ಬೀರ್ ಸಿಂಗ್, ದಲೈ ಲಾಮಾ ಇನ್ಸ್ಟ್ಟಿಟ್ಯೂಟ್ ಫಾರ್ ಹೈಯರ್ ಎಜುಕೇಶನ್‍ನ ಟೆನ್ಜಿನ್ ಸೆಲೋನ್, ಮಾಜಿ ಸಂಸದ ಮೌಲಾನಾ ಉಬೈದುಲ್ಲಾ ಖಾನ್ ಅಝ್ಮಿ, ಶಾಸಕ ಎನ್.ಎ.ಹಾರೀಸ್, ಜೆಡಿಎಸ್ ನಾಯಕ ತನ್ವೀರ್, ರಾಜ್ಯ ವಕ್ಫ್ ಬೋರ್ಡಿನ ಮಾಜಿ ಅಧ್ಯಕ್ಷ ಖಾಲೀದ್ ಅಹ್ಮದ್, ಕವಿ ಮಂಜರ್ ಭೋಪಾಲಿ, ಲೇಖಕ ಎನ್.ಕೆ.ಮೋಹನ್ ರಾಮ್, ಸೂಫಿ ಗಾಯಕಿ ಖಾನಕ್ ಜೋಷಿ ಸೇರಿದಂತೆ ಪ್ರಮುಖರಿದ್ದರು.







