ನಿಸ್ವಾರ್ಥ ಸೇವೆ, ಸಾರ್ಥಕ ಬದುಕಿಗೆ ಶಿಕ್ಷಕ ವೃತ್ತಿ ಪೂರಕ: ಪ್ರೊ.ಡಾ.ಬಿ. ಅಬ್ದುಲ್ ರಹ್ಮಾನ್
ಗ್ರಾಮಚಾವಡಿಯಲ್ಲಿ ಹಿರಿಯ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ

ಮಂಗಳೂರು, ಸೆ.4: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಓರ್ವ ವ್ಯಕ್ತಿಯನ್ನು ಬದಲಾಯಿಸುವ ಶಕ್ತಿ ಅದಕ್ಕಿದೆ. ಶಿಕ್ಷಕರು ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಬದುಕಿನಲ್ಲಿ ಸಾರ್ಥಕತೆಯನ್ನು ಕಾಣುವರು ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರೊ. ಡಾ.ಬಿ. ಅಬ್ದುಲ್ ರಹ್ಮಾನ್ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಶಿಕ್ಷಕರ ಸಂಘ ಮಂಗಳೂರು ವತಿಯಿಂದ ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಫಜೀರು ಸಮೀಪದ ಗ್ರಾಮಚಾವಡಿಯಲ್ಲಿ ನಡೆದ ಹಿರಿಯ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ನೂರುಲ್ ಅಮೀನ್ ಜಿ.ಎಂ., ಎಚ್.ಮೊಹಮ್ಮದ್ ಮಾಸ್ಟರ್ ಮಲಾರ್, ಇಸ್ಮಾಯಿಲ್ ಮಾಸ್ಟರ್ ಮಲಾರ್ ಅವರನ್ನು ಅವರ ದಶಕಗಳ ಕಾಲದ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು.
ಸಮನ್ವಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ರಝಾಕ್ ಅನಂತಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪೂರ್ವಾಧ್ಯಕ್ಷ ಬಿ.ಎಂ. ತುಂಬೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಶಿಕ್ಷಕರಾದ ನೂರುದ್ದೀನ್ ಅಕ್ಕರಂಗಡಿ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಮೊಹಮ್ಮದ್ ಶಾಹಿದ್ ಮಂಗಳೂರು, ಇರ್ಷಾದ್ ಮೆಲ್ಕಾರ್, ಅಬ್ದುಲ್ ಮಜೀದ್ ಪಾವೂರು, ಸಂಶಾದ್ ಕಣ್ಣೂರು, ಅಸ್ಮ ವಳವೂರು, ಡಾ.ಫಯಾಝ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಮೊಹಮ್ಮದ್ ಮನಾಝಿರ್ ಸ್ವಾಗತಿಸಿದರು. ಸಂಘದ ಬಂಟ್ವಾಳ ಘಟಕಾಧ್ಯಕ್ಷ ಅಬ್ದುಲ್ ಮಜೀದ್ ಎಸ್ ವಂದಿಸಿದರು.







