ಚಿಕ್ಕಮಗಳೂರು: ಅಜ್ಜಂಪುರರದಲ್ಲಿ ಸೌಹಾರ್ದಕ್ಕೆ ಸಾಕ್ಷಿಯಾದ ಗಣೇಶೋತ್ಸವ ಆಚರಣೆ
ಚಿಕ್ಕಮಗಳೂರು, ಸೆ.4: ನಾಡಿನಾದ್ಯಂತ ಗಣೇಶೋತ್ಸವ ಸಂಭ್ರಮ, ಸಡಗರದಿಂದ ನಡೆಯುತ್ತಿರುವ ಮಧ್ಯೆ ಸಾವರ್ಕರ್ ಭಾವಚಿತ್ರದ ವಿವಾದ ಗಣೇಶೋತ್ಸವಕ್ಕೂ ತಟ್ಟಿದ್ದು, ಇದು ಸಾಮರಸ್ಯ, ಸೌಹಾರ್ದಕ್ಕೆ ಧಕ್ಕೆಯನ್ನುಂಟು ಮಾಡಿರುವುದು ಸುಳ್ಳಲ್ಲ. ಆದರೆ ಕಾಫಿನಾಡಿನ ಅಜ್ಜಂಪುರ ಪಟ್ಟಣದಲ್ಲಿ ಗಣೇಶೋತ್ಸವದಲ್ಲಿ ಮುಸ್ಲಿಮ್ ಸಮುದಾಯದ ಕೆಲವರು ಪಾಲ್ಗೊಳ್ಳುವ ಮೂಲಕ ಸಾಮರಸ್ಯ, ಸೌಹಾರ್ದ ಪರಂಪರೆ ಉಳಿಸಲು ಮುಂದಾಗಿದ್ದಾರೆ.
ಜಿಲ್ಲೆಯ ಅಜ್ಜಂಪುರ ಪಟ್ಟಣದ ಕೈಲಾಸಂ ರಂಗಮಂದಿರದಲ್ಲಿ ಪ್ರತೀ ವರ್ಷ ಗಣೇಶೋತ್ಸವ ಆಚರಣ ಸಮಿತಿ ಹಿಂದೂ ಮಹಾಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಅದ್ದೂರಿಯಿಂದ ಗಣೇಶೋತ್ಸವ ಆಚರಿಸುತ್ತಿದೆ. ಹಿಂದೂ ಸಮುದಾಯದವರು ಆಚರಿಸುವ ಗಣೇಶೋತ್ಸವದಲ್ಲಿ ಪ್ರತೀ ವರ್ಷ ಪಟ್ಟಣದ ಮುಸ್ಲಿಮ್ ಸಮುದಾಯದವರು ಪಾಲ್ಗೊಳ್ಳುವ ಮೂಲಕ ಸೌಹಾರ್ದ ಮೆರೆಯುತ್ತಿದ್ದಾರೆ.
ಕಳೆದ ಶನಿವಾರ ಪಟ್ಟಣದ ಮುಸ್ಲಿಮ್ ಮುಖಂಡ ಮಸೂದ್ ಅಹ್ಮದ್ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಮುಸ್ಲಿಮ್ ಮುಖಂಡರು ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದು, ಈ ಮೂಲಕ ಹಿಂದೂ-ಮುಸ್ಲಿಮ್ ಸಮುದಾಯಗಳ ನಡುವಿನ ಸಾಮರಸ್ಯವನ್ನು ಮೆರೆದಿದ್ದಾರೆ.
ಪಟ್ಟಣದ ಮುಸ್ಲಿಂ ಮುಖಂಡರ ಈ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ದೇಶಾದ್ಯಂತ ಇಂತಹ ಸಾಮರಸ್ಯ ಇದ್ದಲ್ಲಿ ಯಾವುದೇ ಗಲಭೆ, ಘರ್ಷಣೆಗಳಿಗೆ ಆಸ್ಪದ ಇರುವುದಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.