ಸಿಸೆರಿಯನ್ ಶಸ್ತ್ರಚಿಕಿತ್ಸೆಯಲ್ಲಿ ಭ್ರೂಣ ಅಪಕ್ವವೆಂದು ತಿಳಿದು ಮತ್ತೆ ಹೊಲಿಗೆ ಹಾಕಿದ ವೈದ್ಯ !

ಕರೀಂಗಂಜ್, ಸೆ. 4: ಅಸ್ಸಾಂನ ಸರಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರೊಬ್ಬರು ಗರ್ಭಿಣಿಗೆ ಪ್ರಸವ ದಿನಾಂಕಕ್ಕಿಂತ ಮೂರುವರೆ ತಿಂಗಳು ಮೊದಲು ಸಿಸೆರಿಯನ್ ಶಸ್ತ್ರಚಿಕಿತ್ಸೆ ನಡೆಸಿ, ಬಳಿಕ ಭ್ರೂಣ ಅಪಕ್ಷ ಎಂಬ ಕಾರಣಕ್ಕೆ ಮತ್ತೆ ಹೊಲಿಗೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸತ್ಯವನ್ನು ಖಚಿತಪಡಿಸಿಕೊಳ್ಳಲು ವಿಚಾರಣೆ ನಡೆಸಲಾಗುವುದು ಎಂದು ರವಿವಾರ ಘಟನೆ ನಡೆದ ಕರೀಂಗಂಜ್ ಸಿವಿಲ್ ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.
“ಈ ಘಟನೆ ಬಗ್ಗೆ ನಾವು ವರದಿ ಸ್ವೀಕರಿಸಿದ್ದೇವೆ. ಸತ್ಯವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸುತ್ತಿದ್ದೇವೆ. ತಪ್ಪೆಸಗಿರುವುದು ಕಂಡು ಬಂದರೆ ತನಿಖಾ ವರದಿ ಆಧರಿಸಿ ವೈದ್ಯರು ಅಥವಾ ಇತರರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಅದು ತಿಳಿಸಿದೆ.
ಈ ಪ್ರಕರಣದ ಕುರಿತು ಪರಿಶೀಲನೆ ನಡೆಸಲು 11 ಸದಸ್ಯರ ಸಮಿತಿ ರೂಪಿಸಲಾಗಿದೆ. ಪ್ರಾಥಮಿಕ ವರದಿ ಶುಕ್ರವಾರ ಸಲ್ಲಿಕೆಯಾಗಲಿದೆ ಎಂದು ಅದು ಹೇಳಿದೆ.
“ನಾವು ಗುವಾಹಟಿಯಲ್ಲಿರುವ ಆರೋಗ್ಯ ಇಲಾಖೆಗೆ ಪ್ರಾಥಮಿಕ ವರದಿ ರವಾನಿಸಿದ್ದೇವೆ. ಶೀಘ್ರದಲ್ಲಿ ಸಂಪೂರ್ಣ ವರದಿ ಸಲ್ಲಿಸಲಿದ್ದೇವೆ” ಎಂದು ಆಡಳಿತ ಮಂಡಳಿ ತಿಳಿಸಿದೆ.





