ರಾಜಕೀಯ ಎದುರಾಳಿಯ ಮೇಲಿನ ಧ್ವೇಷಕ್ಕೆ ಆತನ ಮಗನನ್ನು ಅಪಹರಿಸಿದ ಬಿಜೆಪಿ ಕಾರ್ಪೊರೇಟರ್!

ಬದ್ದಂ ಪ್ರೇಮ್ ಮಹೇಶ್ವರ್ ರೆಡ್ಡಿ (Photo: Facebook)
ಹೈದರಾಬಾದ್: ಬಿಜೆಪಿಯನ್ನು(BJP) ಪ್ರತಿನಿಧಿಸುವ ಹೈದರಾಬಾದ್(Hyderabad) ಮಹಾನಗರ ಪಾಲಿಕೆಯ ಕಾರ್ಪೊರೇಟರ್(Corporator) ಒಬ್ಬರನ್ನು ರಾಚಕೊಂಡ ಪೊಲೀಸರು ತನ್ನ ರಾಜಕೀಯ ಪ್ರತಿಸ್ಪರ್ಧಿಯ ಮಗನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಗದ್ದಿಅನ್ನರಾಮ್ ವಿಭಾಗದ ಜಿಎಚ್ಎಂಸಿ ಕಾರ್ಪೊರೇಟರ್ ಬದ್ದಂ ಪ್ರೇಮ್ ಮಹೇಶ್ವರ್ ರೆಡ್ಡಿ ಸೇರಿದಂತೆ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಐವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು TheNewsMinute ವರದಿ ಮಾಡಿದೆ.
ತನ್ನದೇ ಪಕ್ಷದ ರಾಜಕೀಯ ಪ್ರತಿಸ್ಪರ್ಧಿಯ ಮಗನನ್ನು ಮಹೇಶ್ವರ್ ರೆಡ್ಡಿ ಅಪಹರಿಸಿದ್ದಾಗಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರೂರನಗರ ಪೊಲೀಸರು ಮತ್ತು ರಾಚಕೊಂಡ ಪೊಲೀಸ್ ಕಮಿಷನರೇಟ್ನ ಎಲ್ಬಿ ನಗರ ವಿಶೇಷ ಕಾರ್ಯಾಚರಣೆ ತಂಡವು ಅಪಹರಣ ಪ್ರಕರಣವನ್ನು ಭೇದಿಸಿದ್ದಾರೆ. ಆರೋಪಿಗಳು ಲಂಕಾ ಸುಬ್ರಹ್ಮಣ್ಯಂ (21) ಎಂಬಾತನನ್ನು ಗಡ್ಡಿಅನ್ನಾರಂನ ಪಿ ಆ್ಯಂಡ್ ಟಿ ಕಾಲೋನಿಯಲ್ಲಿರುವ ಆತನ ಮನೆಯಿಂದ ಅಪಹರಿಸಿ ದೈಹಿಕ ಹಿಂಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳು ತನಗೆ ಥಳಿಸಿ, ಸಿಗರೇಟ್ ತುಂಡುಗಳಿಂದ ಸುಟ್ಟು ಹಿಂಸಿಸಿದ್ದಾರೆ ಎಂದು ಸಂತ್ರಸ್ತ ಯುವಕ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳು ಆತನನ್ನು ಸ್ನಾನ ಮಾಡಿ ಸಿದ್ಧರಾಗುವಂತೆ ಕೇಳಿಕೊಂಡಿದ್ದು, ದೇವಾಲಯವೊಂದರಲ್ಲಿ ಆತನನ್ನು ಬಲಿಯಾಗಿ ಅರ್ಪಿಸುತ್ತಾರೆ ಎಂದು ಯುವಕನಲ್ಲಿ ಹೇಳಿದ್ದರು. ಹಾಗೂ ಬಲಿ ಕೊಡುವ ಮುನ್ನ ಜಾನುವಾರುಗಳಿಗೆ ಹಾಕುವಂತೆ ತನ್ನ ಕೊರಳಿಗೆ ಹಾರವನ್ನೂ ಹಾಕಿದರು ಎಂದು ಯುವಕ ಪೊಲೀಸರಿಗೆ ತಿಳಿಸಿದ್ದಾನೆ.
ಮಹೇಶ್ವರ್ ರೆಡ್ಡಿ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಮಾಜಿ ರೌಡಿಶೀಟರ್ ಲಕ್ಷ್ಮೀ ನಾರಾಯಣ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಬಿಜೆಪಿ ಕಾರ್ಯಕರ್ತನಾದ ಶ್ರವಣ್ ಕೂಡ ಲಕ್ಷ್ಮಿ ನಾರಾಯಣ ವಿರುದ್ಧ ವೈಯಕ್ತಿಕ ದ್ವೇಷ ಹೊಂದಿದ್ದರು. ಲಕ್ಷ್ಮೀ ನಾರಾಯಣರನ್ನು ಅಪಹರಿಸಲು ಶ್ರವಣ್ ಜೊತೆಗೂಡಿ ಮಹೇಶ್ವರ್ ರೆಡ್ಡಿ ಸಂಚು ರೂಪಿಸಿದ್ದರು.
ವಿದ್ಯಾರ್ಥಿಗಳಾದ ಪಿ ಮಂಜುನಾಥ್, ಕೆ ಪವನ್ ಕುಮಾರ್, ಆರ್ ಹೇಮಂತ್, ಸಾಫ್ಟ್ವೇರ್ ಉದ್ಯೋಗಿ ಬಲಿವಾಡ ಪ್ರಣೀತ್ ಸೇರಿದಂತೆ ಪುನೀತ್ ತನ್ನ ಸ್ನೇಹಿತರ ಸಹಾಯವನ್ನು ಪಡೆದುಕೊಂಡು ಸೆಪ್ಟೆಂಬರ್ 1 ರಂದು ಮುಂಜಾನೆ ಎರಡು ಕಾರುಗಳಲ್ಲಿ ಲಕ್ಷ್ಮಿ ನಾರಾಯಣ ಅವರ ನಿವಾಸಕ್ಕೆ ತೆರಳಿದ್ದರು. ಅಲ್ಲಿ, ಮನೆ ಸಮೀಪದ ಗಣೇಶ ಮಂಟಪದಲ್ಲಿ ಕುಳಿತಿದ್ದ ಅವರ ಮಗ ಸುಬ್ರಹ್ಮಣ್ಯಂ ಅವರನ್ನು ಅಪಹರಿಸಿ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿಗೆ ಕರೆದೊಯ್ದಿದ್ದಾರೆ.
ಪೊಲೀಸರ ಪ್ರಕಾರ, ಮೂರನೇ ಆರೋಪಿ ಪುನೀತ್ ತಿವಾರಿ ಮತ್ತು ಮಹೇಶ್ವರ್ ರೆಡ್ಡಿ ನಡುವಿನ ಚಾಟ್ನಲ್ಲಿ, ಮಹೇಶ್ವರ್ ರೆಡ್ಡಿ ಪ್ರಕರಣದ ಪ್ರಮುಖ ಸಂಚುಕೋರ ಎಂದು ದೃಢಪಟ್ಟಿದೆ. ಪೊಲೀಸರು ಐಪಿಸಿ ಪ್ರಕಾರ 363, 364,367, 342,324 , 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಕಾರ್ಪೊರೇಟರ್ ವಿರುದ್ಧ ಇದೇ ರೀತಿಯ ಮತ್ತೊಂದು ಅಪಹರಣ ಪ್ರಕರಣವಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಸಂತ್ರಸ್ತ ಮತ್ತು ಆರೋಪಿಯನ್ನು ಚಿಂತಪಲ್ಲಿ ಬಳಿ ಪತ್ತೆ ಮಾಡಿದ್ದಾರೆ.







