ಕೆಲವು ಶಕ್ತಿಗಳಿಂದ ಭಾರತ-ಚೀನಾ ಭಿನ್ನಾಭಿಪ್ರಾಯದ ದುರ್ಬಳಕೆ: ರಶ್ಯ

ಮಾಸ್ಕೊ, ಸೆ.4: ಕೆಲವು ಶಕ್ತಿಗಳು ಭಾರತ ಮತ್ತು ಚೀನಾದ ನಡುವಿನ ಭಿನ್ನಾಭಿಪ್ರಾಯವನ್ನು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಭಾರತಕ್ಕೆ ರಶ್ಯದ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿದ್ದಾರೆ.
ರಶ್ಯ-ಭಾರತ-ಚೀನಾ (ಆರ್‌ಐಸಿ) ತ್ರಿಪಕ್ಷೀಯ ಬಾಂಧವ್ಯವು ಮೂರೂ ದೇಶಗಳಲ್ಲಿ ಅಸಾಧಾರಣ ಸಹಕಾರ ಸಂಬಂಧದ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಭಾರತ-ಚೀನಾ ನಡುವೆ ರಚನಾತ್ಮಕ ಸಂವಾದವನ್ನು ಉತ್ತೇಜಿಸಲು ಒತ್ತಾಸೆ ನೀಡುವ ಚೌಕಟ್ಟು ಆಗಬಹುದು. ಈ ತ್ರಿಪಕ್ಷಿಯ ಬಾಂಧವ್ಯದ ಅನುಸಂಧಾನವು ಇತರ ಕೆಲವು ಶಕ್ತಿಗಳ ಧೋರಣೆಗಿಂತ ವಿಭಿನ್ನವಾಗಿರಲಿದೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಲಿಪೋವ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ನೇತೃತ್ವದ ಭಾರತ- ಪೆಸಿಫಿಕ್ ಉಪಕ್ರಮವನ್ನು ಟೀಕಿಸಿದ ಅವರು, ಇದು ನಿಯಂತ್ರಕ ನೀತಿಯ ಭಾಗವಾಗಿದೆ . ಆದರೆ ಕ್ವಾಡ್‌ನ ‘ವಿಭಜಕ ಹೇಳಿಕೆ’ಯನ್ನು ಅನುಮೋದಿಸಲು ನಿರಾಕರಿಸಿದ ಭಾರತದ ನಿಲುವು ಶ್ಲಾಘನೀಯ ಎಂದರು. ಆರ್‌ಐಸಿ ಈ ಪ್ರದೇಶದಲ್ಲಿ ಪರಸ್ಪರ ತಿಳುವಳಿಕೆ, ನಂಬಿಕೆ ಮತ್ತು ಸ್ಥಿರತೆಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಇದು ಸದಸ್ಯ ದೇಶಗಳ ನಡುವೆ ಸಹಕಾರ ಮತ್ತು ಸಮನ್ವಯವನ್ನು ಹೆಚ್ಚಿಸಲು ಮತ್ತಷ್ಟು ಕೊಡುಗೆಯನ್ನು ನೀಡುತ್ತದೆ. ಇದು ಭಾರತ- ಚೀನಾ ನಡುವಿನ ರಚನಾತ್ಮಕ ಮಾತುಕತೆಗೆ ಉತ್ತೇಜನ ನೀಡುತ್ತದೆ ಎಂಬ ವಿಶ್ವಾಸ ಇರುವುದರಿಂದ ನಿಸ್ಸಂಶಯವಾಗಿ ರಶ್ಯಾಕ್ಕೆ ಇದು ಆದ್ಯತೆಯ ವಿಷಯವಾಗಿದೆ. ಈ ವಲಯದಲ್ಲಿ ಪರಸ್ಪರ ತಿಳುವಳಿಕೆ, ವಿಶ್ವಾಸ ಮತ್ತು ಸ್ಥಿರತೆಯನ್ನು ವೃದ್ಧಿಸುವಲ್ಲಿ ಹಾಗೂ ಮೂವರೂ ಭಾಗವಾಗಿರುವ ಬ್ರಿಕ್ಸ್, ಶಾಂಘೈ ಸಹಕಾರ ಸಂಘಟನೆಯಂತಹ ಬಹುಪಕ್ಷೀಯ ಸಂಸ್ಥೆಗಳ ಕಾರ್ಯಸೂಚಿಯನ್ನು ಬೆಂಬಲಿಸುವಲ್ಲಿ ಆರ್‌ಸಿಐ ನಿರ್ಣಾಯಕವಾಗಿದೆ ಎಂದವರು ಹೇಳಿದ್ದಾರೆ.
ಆರ್‌ಐಸಿ ಚೌಕಟ್ಟಿನ ಪ್ರಕಾರ, ಮೂರೂ ದೇಶಗಳ ವಿದೇಶಾಂಗ ಸಚಿವರು ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯಗಳನ್ನು ಚರ್ಚಿಸಲು ನಿಯತಕಾಲಿಕವಾಗಿ ಭೇಟಿಯಾಗುತ್ತಾರೆ.
ಸಮಗ್ರವಾಗಿ ಈ ಪ್ರದೇಶದಕ್ಕೆ ಸಂಬಂಧಿಸಿ ಭಾರತ ಮತ್ತು ರಶ್ಯದ ವಿಧಾನಗಳು ಏಕರೀತಿಯಾಗಿವೆ. ನಮ್ಮ ಕ್ರಿಯೆಗಳು ನಮ್ಮ ಮಾತನ್ನು ಸಮರ್ಥಿಸುವಂತಿರುತ್ತದೆ. ನಾವು ಇಎಎಸ್(ಪೂರ್ವ ಏಶ್ಯಾ ಶೃಂಗಸಭೆ), ಎಆರ್‌ಎಫ್(ಆಸಿಯಾನ್ ಪ್ರಾದೇಶಿಕ ವೇದಿಕೆ) ಮತ್ತು ಎಡಿಎಂಎಂ(ಆಸಿಯಾನ್ ರಕ್ಷಣಾ ಸಚಿವರ ಸಭೆ)ಯ ಚೌಕಟ್ಟಿನಲ್ಲಿ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಎರಡೂ ದೇಶಗಳ ನಡುವಿನ ಸಹಕಾರ ಸಂಬಂಧದ ವಿಸ್ತರಣೆಗೆ ವ್ಯಾಪಕ ಅವಕಾಶವಿದೆ ಎಂದರು.
ರಶ್ಯಾ- ಭಾರತದ ಕಾರ್ಯತಂತ್ರದ ಪಾಲುದಾರಿಕೆಯ ಉತ್ತಮ ಲಕ್ಷಣವೆಂದರೆ ಅದು ಯಾರ ವಿರುದ್ಧವೂ ನಿರ್ದೇಶಿಸಲ್ಪಟ್ಟಿಲ್ಲ. ಇದು ಸಮಾನ ಬಹುಧ್ರುವೀಯತೆ, ವಿಶ್ವಸಂಸ್ಥೆಯ ಕೇಂದ್ರಪಾತ್ರ, ಜಾಗತಿಕ ಮತ್ತು ಪ್ರಾದೇಶಿಕ ಸ್ಥಿರತೆಗೆ ಪ್ರಮುಖ ಅಗತ್ಯವಾದ ಎಲ್ಲಾ ದೇಶಗಳ ಹಿತಾಸಕ್ತಿ ಮತ್ತು ಕಳವಳವನ್ನು ಗೌರವಿಸುವ ಅಂಶವನ್ನು ಹೊಂದಿದೆ. ಪ್ರಮುಖ ವಿಷಯಗಳಿಗೆ ಸಂಬಂಧಿಸಿ ನಮ್ಮ ಅನುಸಂಧಾನದಲ್ಲಿ ಹೋಲಿಕೆಯಿದೆ ಅಥವಾ ಕಾಕತಾಳೀಯವಾಗಿದೆ. ಏಕಪಕ್ಷೀಯವಾಗಿ ಹೇರಿದ ಮುಖಾಮುಖಿ ವಿಧಾನ, ದೇಶೀಯ ವ್ಯವಹಾರದಲ್ಲಿ ಮಧ್ಯಪ್ರವೇಶಿಸುವ ಪ್ರಯತ್ನ, ಪ್ರತ್ಯೇಕತೆಗೆ ಉತ್ತೇಜನ ಮತ್ತು ಎರಡು ಮಾನದಂಡದ ಅನುಸರಣೆಗೆ ಎರಡೂ ದೇಶಗಳ ವಿರೋಧವಿದೆ ಎಂದರು. ತೈವಾನ್-ಚೀನಾ ಬಿಕ್ಕಟ್ಟಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಆ ಎರಡು ದೇಶಗಳ ನಡುವಿನ ವ್ಯವಹಾರ. ಅಮೆರಿಕ ಯಾಕೆ ಮಧ್ಯಪ್ರವೇಶಿಸಬೇಕು ಎಂದು ಪ್ರತಿಕ್ರಿಯಿಸಿದರು.
ಇಂಡೊ-ಪೆಸಿಫಿಕ್ ಪದದ ಬಗ್ಗೆ ಒಮ್ಮತವಿಲ್ಲ
‘ಇಂಡೊ-ಪೆಸಿಫಿಕ್’ನಲ್ಲಿನ ಕಾರ್ಯತಂತ್ರದ ಪೈಪೋಟಿಯ ಹಿನ್ನೆಲೆಯಲ್ಲಿ ಭಾರತ-ರಶ್ಯ ನಡುವಿನ ಸಹಕಾರ ಸಂಬಂಧದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಂಡೊ-ಪೆಸಿಫಿಕ್’ ಪದದ ಬಗ್ಗೆಯೇ ಇನ್ನೂ ಒಮ್ಮತವಿಲ್ಲ ಎಂದರು. ಉಕ್ರೇನ್ ಬಿಕ್ಕಟ್ಟು ಉಲ್ಬಣಗೊಳ್ಳುವ ಮುನ್ನವೇ ರಶ್ಯವನ್ನು ಬೆದರಿಕೆ ಎಂದು ಬಹಿರಂಗವಾಗಿ ಹೆಸರಿಸಿ, ವಿಶೇಷ ನಿಯಂತ್ರಣ ನೀತಿಯನ್ನು ನಿರ್ವಹಿಸಲು ಅಮೆರಿಕ ಈ ಪದವನ್ನು ಬಳಸಿದೆ ಎಂಬುದನ್ನು ಮರೆಯಬಾರದು. ರಶ್ಯಾ ಮಾತ್ರವಲ್ಲ, ಇತರ ದೇಶಗಳನ್ನು ಸಂಘರ್ಷದಲ್ಲಿ ನಿರತರಾಗುವಂತೆ ಮಾಡಲು ಅಮೆರಿಕ ಇಂತಹ ನೀತಿಯನ್ನು ಬಳಸುತ್ತಿದೆ. ಈ ನಿಟ್ಟಿನಲ್ಲಿ ಭಾರತ ತಳೆದಿರುವ ನಿಲುವನ್ನು ನಾವು ಶ್ಲಾಘಿಸುತ್ತೇವೆ ಎಂದರು.







