ಮಹಿಳೆಯರು ಚಳುವಳಿಗೆ ಹೊಸಗತಿಯನ್ನು ಕೊಡುತ್ತಾರೆ: ದು.ಸರಸ್ವತಿ

ಬೆಂಗಳೂರು, ಸೆ.4: ಮಹಿಳೆಯರಿಗೆ ಒಮ್ಮೆ ಯೋಚಿಸುವ ಶಕ್ತಿಯನ್ನು ನೀಡಿದರೆ, ಯಾವುದೇ ಗುಂಪಿರಲಿ ಅಲ್ಲಿ ಅವರು ಭಿನ್ನವಾಗಿಯೇ ಯೋಚಿಸಿ ಇಡೀ ಚಳವಳಿಗೆ ಹೊಸ ಗತಿಯನ್ನು ಒದಗಿಸುತ್ತಾರೆ ಎಂದು ಲೇಖಕಿ ದು.ಸರಸ್ವತಿ ಅವರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಗಾಂಧಿಭವನದಲ್ಲಿ ತಮಟೆ-ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಆಯೋಜಿಸಿದ್ದ ‘ನಾವೂ ಇತಿಹಾಸ ಕಟ್ಟಿದೆವು' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘1932ರಲ್ಲಿ ಬಾಬಾಸಾಹೇಬರು ಜನತಾ ಪತ್ರಿಕೆ ಆರಂಭಿಸಿದಾಗ ಅದರಲ್ಲಿ ಹೆಣ್ಣುಮಕ್ಕಳಿಗೆ ಉಸ್ತುವಾರಿ ನೀಡಿದ್ದರು. ಈ ರೀತಿ ದಲಿತ ಚಳುವಳಿ, ಸ್ವಾತಂತ್ರ್ಯ ಚಳುವಳಿ ವೇಳೆ ಭಾಗಿಗಳಾಗಿ, ಇತಿಹಾಸದ ಪುಟಗಳಲ್ಲಿ ಅದೃಶ್ಯರಾಗಿರುವ ದಲಿತ ಹೆಣ್ಣುಮಕ್ಕಳನ್ನು ಮುನ್ನೆಲೆಗೆ ತಂದರೆ ಇಂದಿನವರಿಗೆ ಸ್ಫೂರ್ತಿಯಾಗಬಲ್ಲರು ಆಶಿಸಿದರು.
ಮಾತು, ಕೃತಿ, ಕ್ರಿಯೆಯಲ್ಲಿ ಅಂಬೇಡ್ಕರ್ ಮಹಿಳಾ ಪರ ಇದ್ದರು ಎಂಬುದನ್ನು ಈ ಕೃತಿ ತಿಳಿಸುತ್ತದೆ. ಕೃತಿಯಲ್ಲಿರುವ ವಿಷಯಗಳನ್ನು ಜನರಿಗೆ ತಿಳಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ಹಾಗೆಯೇ ದೇಶದಲ್ಲಿ ಅತ್ಯಾಚಾರಿಗಳ ಬಿಡುಗಡೆಯನ್ನು ಸಂಭ್ರಮಿಸಿ ಆರತಿ ಎತ್ತಿ ಸಿಹಿ ತಿನಿಸಲಾಯಿತು. ನಿರಂತರವಾಗಿ ಸ್ವಾಮೀಜಿಯೊಬ್ಬ ಅಪ್ರಾಪ್ತೆಯರನ್ನು ಲೈಂಗಿಕ ಶೋಷಣೆ ಮಾಡುವ ಪ್ರಕರಣ ಈಗ ಮುನ್ನೆಲೆಗೆ ಬಂದಿದೆ. ನೀರು ಮುಟ್ಟಿದ್ದಕ್ಕೆ ದಲಿತ ಬಾಲಕನ ಬಡಿದು ಕೊಂದ ಘಟನೆ ದೇಶದಲ್ಲಿ ನಡೆದಿದೆ. ಹಾಗಾಗಿ ಇಂದಿನ ಬಿಕ್ಕಟಿನ ಕಾಲಮಾನದಲ್ಲಿ ಈ ಕೃತಿ ಅನಿವಾರ್ಯ ಎನಿಸಿತು ಎಂದು ಅವರು ತಿಳಿಸಿದರು.
ವಿಶ್ರಾಂತ ಕುಲಪತಿ ಡಾ.ಸಬೀಹಾ ಭೂಮಿಗೌಡ ಮಾತನಾಡಿ, ‘ಅನೇಕ ಬಗೆಯ ಅರ್ಥದ ಛಾಯೆಯನ್ನು ಪುಸ್ತಕದ ಶೀರ್ಷಿಕೆ ಹೊಂದಿದ್ದು, ಅಂಬೇಡ್ಕರ್ ಚಳುವಳಿಯೊಳಗೆ ಭಾಗವಹಿಸಿದ್ದ 44ಜನ ಹೆಣ್ಣುಮಕ್ಕಳು ವೈಯಕ್ತಿಕವಾಗಿಯೂ ಸಬಲೀಕರಣಗೊಂಡಿದ್ದರ ಪ್ರತಿಬಿಂಬವೂ ಆಗಿದೆ. ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ಅವರು ಮಹಿಳಾ ಶಕ್ತಿಯನ್ನು ಅರ್ಥೈಸಿಕೊಂಡು ತಮ್ಮೊಂದಿಗೆ ಕರೆದೊಯ್ಯುವಲ್ಲಿ ಎಳ್ಳಷ್ಟು ಉದಾಸೀನತೆ ಮಾಡಿದವರಲ್ಲ. ಇದರ ಭಾಗವಾಗಿ ಬಾಳಸಂಗಾತಿಯನ್ನು ಸೇರಿಸಿಕೊಂಡು ಚಳುವಳಿ ನಡೆಸಿದ್ದರು. ಹಾಗಾಗಿಯೇ ಅಂದು ಈ ಇಬ್ಬರು ಮಹಾನ್ ನಾಯಕರ ಮಾರ್ಗದರ್ಶನದಲ್ಲಿ ನಡೆದ ಹೆಣ್ಣುಮಕ್ಕಳು ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಲು ಸಾಧ್ಯವಾಯಿತು’ ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಬಿ.ಸುರೇಶ್, ಲೇಖಕಿ ವಿಜಯಮ್ಮ, ಡಾ.ವಸೂಂಧರ ಭೂಪತಿ, ಲೇಖಕಿ ಡಾ. ಭಾರತಿ ದೇವಿ, ಕೆಸ್ತಾರ, ವಿ.ಎಲ್.ನರಸಿಂಹ ಮೂರ್ತಿ, ಹುಲಿಕುಂಟೆ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ಭಾರತದ ಸಂವಿಧಾನ ಆರಂಭಗೊಳ್ಳುವುದೇ ಇಡೀ ದೇಶದ ಎಲ್ಲರನ್ನು ಒಳಗೊಂಡ ‘ನಾವೂ' ಎಂಬ ಪದದಿಂದ. ಅದೇರೀತಿ ನಾವೂ ಇತಿಹಾಸ ಕಟ್ಟೆದೆವು ಪುಸ್ತಕ ಇಡೀ ‘ನಾವೂ' ಎಂಬುದರಿಂದ ಆರಂಭಗೊಂಡಿದ್ದು, ಭಾರತೀಯ ದಲಿತ ಚಳುವಳಿಯ ಅರ್ಥೈಸಿಕೊಳ್ಳಲು ಸಿಕ್ಕಿರುವ ಮಹಾನ್ ಆಧ್ಯಯನ ಇದಾಗಿದೆ. ಅಂಬೇಡ್ಕರ್ ಜೊತೆ ಚಳುವಳಿಯಲ್ಲಿ ಭಾಗಿಯಾದ ಹೆಣ್ಣುಮಕ್ಕಳ ಚಾರಿತ್ರ್ಯವನ್ನು ಅನುಮಾನಿಸುವುದು, ಅವರ ತಲ್ಲಣಗಳು, ಗರ್ಭಿಣಿಯರು ಚಳುವಳಿಯ ಭಾಗವಾಗಿದ್ದು, ಜೈಲಿನಲ್ಲಿ ಹೆರಿಗೆಯಾದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಈ ಪುಸ್ತಕ ಒಳಗೊಂಡಿದೆ'
-ಪೀರ್ ಭಾಷಾ, ಲೇಖಕ







