ಏಶ್ಯಕಪ್ ಸೂಪರ್-4: ಭಾರತ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ
ಮುಹಮ್ಮದ್ ರಿಝ್ವಾನ್ ಅರ್ಧಶತಕ
Photo : @TheRealPCB
ದುಬೈ, ಸೆ.4: ಆರಂಭಿಕ ಬ್ಯಾಟರ್ ಮುಹಮ್ಮದ್ ರಿಝ್ವಾನ್ ಅರ್ಧಶತಕದ (71 ರನ್, 51 ಎಸೆತ, 6 ಬೌಂಡರಿ,2 ಸಿಕ್ಸರ್)ನೆರವಿನಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ವಿರುದ್ಧದ ಏಶ್ಯಕಪ್ ನ ಸೂಪರ್-4 ಪಂದ್ಯದಲ್ಲಿ 5 ವಿಕೆಟ್ ನಿಂದ ರೋಚಕ ಗೆಲುವು ದಾಖಲಿಸಿದೆ.
ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 182 ರನ್ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಗೆಲುವಿನ ನಗೆ ಬೀರಿದೆ.
ಪಾಕ್ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಹಾಗೂ ಆರಂಭಿಕ ಬ್ಯಾಟರ್ ಬಾಬರ್ ಆಝಂ(14)ಬೇಗನೆ ವಿಕೆಟ್ ಕೈಚೆಲ್ಲಿದರು. ಫಾಖರ್ ಝಮಾನ್(15) ಕೂಡ ಬೇಗನೆ ಔಟಾದರು. ಆಗ ಜೊತೆಯಾದ ರಿಝ್ವಾನ್ ಹಾಗೂ ಮುಹಮ್ಮದ್ ನವಾಝ್ (42 ರನ್, 20 ಎಸೆತ)3ನೇ ವಿಕೆಟಿಗೆ 73 ರನ್ ಜೊತೆಯಾಟ ನಡೆಸಿ ಗೆಲುವಿನ ವಿಶ್ವಾಸ ಮೂಡಿಸಿದರು. ನವಾಝ್ ವಿಕೆಟ್ ಉರುಳಿಸಿದ ಭುವನೇಶ್ವರ ಕುಮಾರ್ ಈ ಜೋಡಿಯನ್ನು ಬೇರ್ಪಡಿಸಿದರು.
17ನೇ ಓವರ್ ನಲ್ಲಿ ರಿಝ್ವಾನ್ ವಿಕೆಟನ್ನು ಕಬಳಿಸಿದ ಹಾರ್ದಿಕ್ ಪಾಂಡ್ಯ ಪಾಕ್ ಗೆ ಆಘಾತ ನೀಡಿದರು. ಖುಷ್ ದಿಲ್ ಶಾ(14) ಹಾಗೂ ಅಸಿಫ್ ಅಲಿ(16) ಪಾಕಿಸ್ತಾನವನ್ನು ಗೆಲುವಿನ ದಡ ಸೇರಿಸಿದರು.
ಭಾರತದ ಪರ ಬೌಲಿಂಗ್ ನಲ್ಲಿ ಭುವನೇಶ್ವರ್, ರವಿ ಬಿಷ್ಣೋಯಿ, ಹಾರ್ದಿಕ್ ಪಾಂಡ್ಯ ಹಾಗೂ ಯಜುವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಗಳನ್ನು ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ(60 ರನ್, 44 ಎಸೆತ)ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.